fbpx

ಆಷಾಢ ಸಂಭ್ರಮ.

                    – ಶಿರೀನ್ ವಿಶ್ವನಾಥ್. ಮಲೆನಾಡು

ಮುಂಗಾರುವಿನ ತುಂತುರು ಸ್ಪರ್ಶದಿಂದ, ಪ್ರಕೃತಿಯು ಹಸಿರ ಹೊದಿಕೆಯೊಡನೆ ಶೃಂಗಾರಗೊಂಡು ನವ – ವಧುವಿನಂತೆ ಕಂಗೊಳಿಸುತ್ತಿರುವಾಗ ಬರುವ ಮಾಸವೇ “ಆಷಾಢ” . ನಮ್ಮ ದೇಶದಲ್ಲಿ ಕೆಲವೆಡೆ ಜೂನ್ – ಜುಲೈ ತಿಂಗಳಲ್ಲಿ ಇನ್ನೂ ಕೆಲವೆಡೆ ಜುಲೈ – ಆಗಸ್ಟ್ ತಿಂಗಳಲ್ಲಿ ಈ ಮಾಸದ ಆಚರಣೆ ಮಾಡುತ್ತಾರೆ .

ಕೃಷಿ ಆಧಾರಿತ ಕೊಡಗಿನಲ್ಲಿ ಈ ತಿಂಗಳು ಬಂತೆಂದರೆ ಅದೇನೋ ಉತ್ಸಾಹ . ಆಟಿ ತಿಂಗಳು ಎಂದು ಕರೆಯಲ್ಪಡುವ ಈ ಮಾಸವು “ಅಶುಭ”ದ ಹಣೆಪಟ್ಟಿ ಹೊಂದಿದ್ದರೂ ನಮ್ಮ ಕೃಷಿಕರಿಗೆ ಮಾತ್ರ ಶುಭ ಪರ್ವ . ಭೂಮಾತೆ ಮುಗುಳ್ನಗೆಯೊಂದಿಗೆ ತನ್ನೊಡಲಿಗೆ ರೈತರನ್ನು ಆಹ್ವಾನಿಸುತ್ತಿದ್ದರೆ, ಇವರೂ ಕೃಷಿ ಚಟುವಟಿಕೆಗಳಿಗೆ ಸನ್ನದ್ಧರಾಗಿ ಬೇಕಾದ ಸಲಕರಣೆಗಳೊಂದಿಗೆ ಭೂಮಿಗಿಳಿದಿರುತ್ತಾರೆ.

ಧಾರಾಕಾರವಾಗಿ ಮಳೆ ಹೊರಗೆ ಸುರಿಯುತ್ತಿದ್ದರೂ ಲೆಕ್ಕಿಸದೆ ಕೆಲಸದಲ್ಲಿ ತಲ್ಲೀನರಾಗಿ ದುಡಿಯುವ ರೈತರು ಮನೆಯೊಳಗೆ ಬಂದಾಗ ಬೆಚ್ಚನೆಯ ಅನುಭವ . ಆಟಿ ತಿಂಗಳಿಗೆಂದೇ ಮೀಸಲಾಗಿಟ್ಟಿರುವ ಪದಾರ್ಥಗಳ ವಿಶೇಷ ಅಡುಗೆಗಳು ಆಗಿರುವ ಆಯಾಸವನ್ನು ಇನ್ನಿಲ್ಲದಂತ ಅಟ್ಟಿಸಿಬಿಡುತ್ತವೆ . ಆಟಿಕೋಳಿ, ಆಟಿ ಏಡಿ,ಆಟಿ ಕೆಸದ ಪತ್ರೊಡೆ, ಕಣಿಲೆ, ಅಣಬೆ, ವಿಶೇಷವಾಗಿ ಆಟಿ ಪಾಯಸ ( ಮದ್ದುಕೂಳು ಪಾಯಸ – ಆಟಿ ತಿಂಗಳು ಪ್ರಾರಂಭವಾದ ೧೮ನೆ ದಿನಕ್ಕೆ ವಿಶೇಷವಾಗಿ ಸಿಗುವ ಔಷಧಯುಕ್ತ ಸೊಪ್ಪನ್ನು ನೀರಿನಲ್ಲಿ ಕುದಿಸಿ, ಕುದಿಸಿದ ನೀರಿನಲ್ಲಿ ಅಕ್ಕಿ ಬೆಲ್ಲ ಹಾಕಿ ಮಾಡುವ ಪಾಯಸ ) ಮಳೆಗಾಲಕ್ಕೆಂದೇ ಒಣಗಿಸಿಟ್ಟ ಉಪ್ಪಣ,ಮೀನು, ಹಲಸಿನ ಬೀಜ, ಜೋಳ, ಉಪ್ಪಿಗೆ ಹಾಕಿಟ್ಟ ಮಾವಿನ ಹಣ್ಣಿನ ಸಾರು ಒಂದೇ ಎರಡೇ ..ತಿಂಗಳು ಪೂರ್ತಿ ಭಾರಿ ಭೋಜನದ ಜೊತೆಗೆ ಬಿಸಿ ಬಿಸಿ ಕಾಫಿಯ ಆಹ್ಲಾದ .       

ಗದ್ದೆಗಳ ಏರಿಯ ಮೇಲಿನ ಸರ್ಕಸ್ಸಿನ ನಡಿಗೆ , ಹರಿಯುವ ತೋಡುಗಳಲ್ಲಿ ಇಳಿದಾಡುವ ನೀರಿನಾಟ,ನಾಟಿ ಮಾಡುವಾಗ ಪೈರಿನ ಹೊರೆ ಹೊತ್ತು ಸಾಗುವಾಗಿನ ಪರದಾಟ, ಬೀಸುವ ಗಾಳಿಗೆ ಹಾರುವ ಕೊಡೆ ಹಿಡಿದು ನಡೆಯುವ ಸಾಹಸ ..ಹೀಗೆ ಹತ್ತಾರು ಸುಮಧುರ ಅನುಭವಗಳು . “ಶುಭಕಾರ್ಯ” ನಡೆಯುವಂತಿಲ್ಲ ಎಂಬ ಕಳಂಕದಿಂದ ಈ ಮಾಸ ಮುಕ್ತವಾಗಿಲ್ಲವಾದರೂ ಕೊಡಗು ಮಾತ್ರ ಈ ತಿಂಗಳು “ಸಂಭ್ರಮದ ತವರೂರಾಗಿರುತ್ತದೆ”.

ಶಿರೀನ್ ವಿಶ್ವನಾಥ್. ಮಲೆನಾಡು

error: Content is protected !!