ಆರೋಗ್ಯ ಸ್ನೇಹಿ ಅರಿಶಿಣ ಗಣೇಶ ಪೂಜಿಸಿ: ಡಿಗ್ರಿ ಕಾಲೇಜಿನಲ್ಲಿ ಜಾಗೃತಿ ಅಭಿಯಾನ

ಕುಶಾಲನಗರ, ಸೆ.7: ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬೆನ್ನಲೇ, ಗೌರಿ ಗಣೇಶ ಹಬ್ಬವು ಸಮೀಪಿಸುತ್ತಿರುವ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಇರುವ ಅರಿಶಿಣದಿಂದ ಗಣೇಶನನ್ನು ಮನೆಯಲ್ಲೇ ತಯಾರಿಸಿ, ಪೂಜಿಸಿದ ನಂತರ ಮನೆಯಲ್ಲೇ ವಿಸರ್ಜಿಸಿ ಪರಿಸರ ಮಾಲಿನ್ಯ ನಿಯಂತ್ರಿಸಲು ಸಹಕರಿಸಬೇಕೆಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಬಿ.ಲಿಂಗಮೂರ್ತಿ ಮನವಿ ಮಾಡಿದರು.
ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್.ಘಟಕ ಹಾಗೂ ,ರೇಂಜರ್ ರೋವರ್ ಸಂಯುಕ್ತಾಶ್ರಯದಲ್ಲಿ ಗೌರಿ ಗಣೇಶ ಹಬ್ಬಕ್ಕೆ ಪೂರಕವಾಗಿ “ನಮ್ಮ ನಡೆ ಹಸಿರೆಡೆಗೆ'” “-‘ಗ್ರೋ ಗ್ರೀನ್'” ಅಭಿಯಾನದಡಿ ಏರ್ಪಡಿಸಿದ್ದ ಪರಿಸರ ಜಾಗೃತಿ ಅಭಿಯಾನದಲ್ಲಿ ಅರಿಶಿಣ ಗಣೇಶೋತ್ಸವ ಆಚರಣೆ ಕುರಿತು ಮಾತನಾಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಸಕ್ತ ವರ್ಷದಲ್ಲಿ ರೋಗ ನಿರೋಧಕ ಗುಣ ವುಳ್ಳ ಅರಿಶಿಣ ಗಣೇಶನನ್ನು ಪುಟ್ಟದಾಗಿ ಮನೆಯಲ್ಲೇ ತಯಾರಿಸಿ ಆಚರಿಸಬೇಕೆಂದು ಜಾಗೃತಿ ಮೂಡಿಸುತ್ತಿದೆ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿ ಸಂದರ್ಭದಲ್ಲಿ ಅರಿಶಿಣ ಮತ್ತಿತರ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಿಕೊಂಡು ಅರಿಶಿಣ ಗಣೇಶ ಮೂರ್ತಿ ತಯಾರಿಸುವ ಮೂಲಕ ಮಾಲಿನ್ಯ ಮುಕ್ತ ಹಬ್ಬಗಳನ್ನು ಆಚರಿಸಬೇಕು ಎಂದರು.
ಅಭಿಯಾನದ ಜಿಲ್ಲಾ ಸಂಯೋಜಕರೂ ಆದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ , ಅರಿಶಿಣ ಗಣೇಶೋತ್ಸವ ಆಚರಣೆ ಮತ್ತು ಗಣೇಶ ಮೂರ್ತಿ ತಯಾರಿಕೆ ಕುರಿತು ಮಾಹಿತಿ ನೀಡಿ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು.
ಅರಿಶಿಣ ಗಣೇಶ ಅಭಿಯಾನದ ಕುರಿತು ವಿದ್ಯಾರ್ಥಿಗಳು ಸಮುದಾಯದಲ್ಲಿ ಪರಿಸರ ಜಾಗೃತಿ ಮೂಡಿಸುವ ಮೂಲಕ ಮಾಲಿನ್ಯ ರಹಿತ ಹಬ್ಬ ಆಚರಿಸಲು ಸಂಕಲ್ಪ ತೊಡಗಬೇಕು ಎಂದರು.
ವಿದ್ಯಾರ್ಥಿ,ಪರಿಸರ ಕಾರ್ಯಕರ್ತ ಸಾಗರ್ ತೊರೆನೂರು ಮಾತನಾಡಿ, ಅರಿಶಿಣ ಗಣೇಶ ಮೂರ್ತಿ ತಯಾರಿಕೆ ಕುರಿತು ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಪರಿಸರ ಸ್ನೇಹಿ ಜಾಗೃತಿ ಅಭಿಯಾನಕ್ಕೆ ಕೈಜೋಡಿಸಬೇಕು ಎಂದರು.