ಆನ್ ಲೈನ್ ಶಿಕ್ಷಣ ಕಷ್ಟ ಕ್ಲಿಷ್ಟ!

ವಿರಾಜಪೇಟೆ: ನೆಟ್‌ವರ್ಕ್‌ ಸಮಸ್ಯೆ ಹಾಗೂ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕೊಡಗಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಆನ್‌ಲೈನ್‌ ಕಲಿಕೆಗೆ ಅಡ್ಡಿ ಉಂಟಾಗಿದೆ.

ಸಮೀಪದ ಕೆದಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಟ್‌ವರ್ಕ್‌ ಹಾಗೂ ವಿದ್ಯುತ್ ಅಡಚಣೆಯು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಗಾಲು ಹಾಕಿದೆ. ಕೊರೊನಾ ಭೀತಿಯಿಂದ ಆನ್‌ಲೈನ್‌ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇಂದು ಉಂಟಾಗಿದೆ. ಬಡವರು ಕೂಡ ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ದುಬಾರಿ ಮೊಬೈಲ್ ಖರೀದಿಸಿ ಮಕ್ಕಳ ಕೈಗೆ ನೀಡಿದ್ದಾರೆ. ಆದರೆ, ತೆರ್ಮೆಮೊಟ್ಟೆ, ಪಾಲಂಗಾಲ, ಬಾರಿಕಾಡು, ಕೊಟ್ಟೋಳಿ, ಬಾರಿಕಾಡು ಮುಂತಾದ ಕಡೆಗಳಲ್ಲಿ ನೆಟ್‌ವರ್ಕ್‌ ಸಮಸ್ಯೆಯಿದೆ. ಜತೆಗೆ, ಈ ಭಾಗದಲ್ಲಿ ಗಾಳಿ-ಮಳೆಯಿಂದ ಆಗಾಗ್ಗೆ ವಿದ್ಯುತ್ ಕಡಿತವಾಗುತ್ತಿದೆ.

ವಿದ್ಯಾರ್ಥಿಗಳು ಆನ್‌ಲೈನ್‌ ಶಿಕ್ಷಣದ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ.

ವಿರಾಜಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಶಾಲಾ- ಕಾಲೇಜುಗಳಲ್ಲಿ ಈ ಭಾಗದ ಸಾಕಷ್ಟು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿನ ಶೇ 70ರಷ್ಟು ಮಂದಿ ಕಾರ್ಮಿಕರು. ಪೋಷಕರು, ಬಡತನದ ನಡುವೆ ಮಕ್ಕಳಿಗೆ ಮೊಬೈಲ್ ಹೊಂದಿಸಿಕೊಟ್ಟರೂ ಇದೀಗ ನೆಟ್‌ವರ್ಕ್‌ ಸಮಸ್ಯೆಯಿಂದ ಅಸಹಾಯಕರಾಗಿದ್ದಾರೆ.

ಇದರಿಂದ ಅನಿವಾರ್ಯವಾಗಿ ಮಕ್ಕಳು ಮನೆಯಿಂದ ಹೊರಬಂದು ಗುಡ್ಡ, ಮರ, ಬಂಡೆಗಲ್ಲು… ಹೀಗೆ ನೆಟ್‌ವರ್ಕ್‌ ದೊರೆಯುವ ಸ್ಥಳವನ್ನು ನಿತ್ಯ ಹುಡುಕಾಟ ನಡೆಸುತ್ತಿದ್ದಾರೆ. ಈ ಭಾಗಗಳಲ್ಲಿ ಕಾಡಾನೆ ಸೇರಿದಂತೆ ಕಾಡು ಪ್ರಾಣಿಗಳ ಭಯವಿರುವುದರಿಂದ ಮಕ್ಕಳೊಂದಿಗೆ ಪೋಷಕರು ಸಾಗಬೇಕಾದ ಅನಿವಾರ್ಯತೆಯಿದೆ.

ಗುಡ್ಡವನ್ನೇರಿ ಭೂಕುಸಿತವಾಗಿದ್ದ ಅಪಾಯಕಾರಿ ಸ್ಥಳಗಳಲ್ಲಿ ಆನ್‌ಲೈನ್‌ ಶಿಕ್ಷಣ ಪಡೆಯುವ ಸ್ಥಿತಿಯಿದೆ ಎಂದು ಪೋಷಕರು ನೋವು ತೋಡಿಕೊಂಡಿದ್ದಾರೆ.

ಅವಕಾಶವಿರುವವರು ಪಟ್ಟಣ ಸೇರಿದಂತೆ ನೆಟ್‌ವರ್ಕ್‌ ದೊರೆಯುವ ಊರುಗಳಲ್ಲಿರುವ ತಮ್ಮ ಬಂಧುಗಳ ಮನೆಗೆ ಮಕ್ಕಳನ್ನು ಕಳುಹಿಸಿ, ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ. ಉಳಿದ ಮಕ್ಕಳು ಬಂಡೆ ಹಾಗೂ ಮರದ ಮೇಲೆ ಕುಳಿತು ತರಗತಿಯನ್ನು ಕೇಳುವಂತಾಗಿದೆ. ಇದೀಗ ಮಳೆಗಾಲ ಆರಂಭವಾಗಿದ್ದು, ಸಮಸ್ಯೆ ಮತ್ತಷ್ಟು ಉಲ್ಭಣವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

error: Content is protected !!