fbpx

ಆನ್’ಲೈನ್ ಶಿಕ್ಷಣ ಅವಶ್ಯವೇ?

✍🏻ವಿನೋದ್ ಮೂಡಗದ್ದೆ,

ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ. ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. ಬರ್ಕರವರ ಮಾತುಗಳು ನಿಜವೆನಿಸುತ್ತದೆ.

ಇಂದಿನ ದಿನದಲ್ಲಿ ಕೊರೊನಾ ಮಹಾಮಾರಿಯಿಂದ ಇಡೀ ಪ್ರಪಂಚವೇ ಸ್ಥಬ್ದವಾಗಿದೆ‌. ಎಲ್ಲ ತರನಾದ ಕೆಲಸ ಕಾರ್ಯಗಳು ನಿಂತಿವೆ‌‌. ಹಾಗೆಯೇ ಶಾಲಾ ಕಾಲೇಜುಗಳು ಕೂಡ ಇಂದು ವಿದ್ಯಾದಾನವನ್ನು ನೀಡಲಾಗದ ಪರಿಸ್ಥಿತಿಗೆ ತಲುಪಿದೆ.

ಯಾವಾಗ ಕೊರೊನಾ ಮಹಾಮಾರಿ ಶಾಂತವಾಗುವುದೋ. ಯಾವಾಗ ಮತ್ತೆ ಜನಜೀವನ ಸಹಜ ಸ್ಥಿತಿಗೆ ಮರಳುವುದೋ ಗೊತ್ತಿಲ್ಲ.

ವ್ಯಾಪಾರ ವಹಿವಾಟು, ಶೇರು ಮಾರುಕಟ್ಟೆ, ಕೃಷಿ, ಉದ್ಯಮ ಹೀಗೆ ಎಲ್ಲ ಕ್ಷೇತ್ರಗಳೂ ಇಂದು ಅಧಃಪತನದ ಹಾದಿ ಹಿಡಿದಿವೆ. ಲಾಭ ಗಳಿಸುವುದು ಹೋಗಲಿ ಇರುವ ಮಾಲುಗಳು ಖಾಲಿ ಆದರೆ ಸಾಕು ಎನ್ನುವುದು ವ್ಯಾಪಾರಸ್ಥರ ಅನಿಸಿಕೆ.

ಇಂತಹ ಪರಿಸ್ಥಿತಿಯಲ್ಲಿ‌‌ ಪೋಷಕರನ್ನು‌ ಎದುರು ಇರುವ ದೊಡ್ಡ ಪ್ರಶ್ನೆ ಎಂದರೆ ತಮ್ಮ‌‌‌ ಮಕ್ಕಳ ವಿಧ್ಯಾಭ್ಯಾಸದ ಕತೆ ಏನು ಎಂಬುದು.

ಕೊರೊನಾ ಮಹಾಮಾರಿ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಆದ್ದರಿಂದ ಸಾಮಾಜಿಕ ಅಂತರ ಮುಖ್ಯ. ಎಲ್ಲೂ ಕೂಡ ಹೆಚ್ಚು ಜನ ಸೇರುವಂತಿಲ್ಲ ಹೀಗೆ ಎಷ್ಟೇ ನಿಯಮ ಮಾಡಿದರೂ ಅದನ್ನು ಗಾಳಿಗೆ ತೂರಿ ವಿದ್ಯಾವಂತ ಪ್ರಜೆಗಳೇ ಇರುವಾಗ ಇನ್ನು ಸಣ್ಣ ಮಕ್ಕಳು‌ ಕೇಳಿಯಾವೆ?

ಹಾಗಾಗಿ ಸದ್ಯಕ್ಕಂತು‌ ಸರಕಾರ ಅನಿರ್ದಿಷ್ಟಾವಧಿಗೆ ಶಾಲೆ ಕಾಲೇಜು ತೆಗೆಯುವುದನ್ನು ಮುಂದೂಡಿದೆ. ಆದರೆ ಅಷ್ಟು ದಿನ ಮಕ್ಕಳ‌ ಪಾಡೇನು? ಪ್ರತಿದಿನ ಪಾಠ ಹೇಳಿಕೊಟ್ಟಾಗಲೇ ಓದುವುದು ಅಷ್ಟಕಷ್ಟೆ! ಇನ್ನು ಇಂತಹ ಸಂದರ್ಭದಲ್ಲಿ ಹೇಗೆ ಅವರನ್ನು ನಿಭಾಯಿಸುವುದು ಎನ್ನುವುದೇ ಪೋಷಕರ ತಲೆನೋವು.

ಅಂತಹದರಲ್ಲಿ ತಮ್ಮ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಲಿ ಎಂದು ಹೊಟ್ಟೆ ಬಟ್ಟೆ ಕಟ್ಟಿ ಪ್ರತಿಷ್ಟಿತ ಶಾಲೆಗಳಿಗೆ ಕಳಿಸುತ್ತಾರೆ.

ಎಷ್ಟೋ ಜನ ಸಾಲ‌ಸೋಲ ಮಾಡಿ ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಿಸುತ್ತಾರೆ. ಶಿಕ್ಷಣ ಸಂಸ್ಥಗಳಂತು ಈಗ ವಿದ್ಯೆದಾನದ ಬದಲು ಮಾರುವ ಮಾರುಕಟ್ಟೆಯಾಗಿ ಬೆಳೆಯುತ್ತಿರುವುದು ವಿಪರ್ಯಾಸ. ಸರಕಾರ ಎಷ್ಟೇ ನೀತಿ ನಿಯಮಗಳನ್ನು ತಂದರೂ ಅದೆಲ್ಲವನ್ನೂ ಗಾಳಿಗೆ ತೂರಿ ಡೊನೇಷನ್, ಡೆಲವೆಪ್ ಮೆಂಟ್ ಫೀ ಅದು ಇದು ಅಂತ ಎಣೆಯಿಲ್ಲದೆ ಸುಲಿಗೆ ಮಾಡುತ್ತಲೇ ಇದೆ.

ಇದೆಲ್ಲವನ್ನೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಷಕರು ಸಹಿಸಿಕೊಂಡಿದ್ದಾರೆ. ಈಗ ಪ್ರಪಂಚವನ್ನೇ ಕಾಡುತ್ತಿರುವ ಕೊರೊನಾ ಸಮಯದಲ್ಲಿ ಶಾಲೆಗಳು‌ ಮುಚ್ಚಿರಲು ಕೆಲವು‌ ಸಂಸ್ಥೆಗಳು ತೆರೆಮರೆಯಲ್ಲಿ ಸಂಪೂರ್ಣ ಶುಲ್ಕವನ್ನು‌ ಭರಿಸುವಂತೆ ಪೀಡಿಸುತ್ತಿವೆ. ಇನ್ನು ಕೆಲವು ಶಾಲೆಗಳು ದುಪ್ಪಟ್ಟು‌ ಬೆಲೆಗೆ ಪುಸ್ತಕಗಳನ್ನು ನೀಡುತ್ತಿದೆ.

ಇನ್ನು‌ ಮಕ್ಕಳು ಕಲಿತ ವಿದ್ಯೆ‌ ಮರೆಯಬಾರದು ಎಂದು ಆನ್’ಲೈನ್ ತರಗತಿಗಳನ್ನು‌‌ ನಡೆಸುವ ಬಗ್ಗೆ ಚರ್ಚೆಗಳು ಎದ್ದು ಕೊನೆಗೆ ಸುಪ್ರೀಂಕೋರ್ಟ್ ಮೆಟ್ಟಲೇರಿ ಬಂದರೂ. ಇಂದು ಇದು ಎಷ್ಟೋ ಜನರ ನಿದ್ದೆ ಕೆಡಿಸಿದೆ.

ಉಳ್ಳವರು ಶಿವಾಲಯ ಕಟ್ಟುವರು ನಾನೇನು ಮಾಡಲಿ ಬಡವನಯ್ಯ ಎನ್ನುವಂತ ಪರಿಸ್ಥಿತಿ ಕೆಲವರದ್ದು. ಆನ್’ಲೈನ್ ಶಿಕ್ಷಣ ಪಡೆಯಲು ಸ್ಮಾರ್ಟ್ಫೋನ್ ಅಂತು ಬೇಕು. ಇನ್ನು ಅದಕ್ಕೆ ಕಮ್ಮಿ ಅಂದರೂ ದಿನಕ್ಕೆ ೧ ಜಿ.ಬಿ ಡಾಟಾ ಆದರೂ ಬೇಕು. ಇಷ್ಟು ತೆಗೆದುಕೊಟ್ಟರೂ ಹಳ್ಳಿಗಾಡಿನಲ್ಲಿ ನೆಟ್ವರ್ಕ್ ಸಿಗಬೇಕಲ್ಲ?

ಇಷ್ಟೆಲ್ಲ ಅಡೆತಡೆಗಳೊದ್ದರೂ ಕೆಲವು ಶಾಲೆಗಳು ಬೇಕಿದ್ದರೆ ಬನ್ನಿ ಇಲ್ಲವಾದರೆ ಸರಕಾರಿ ಶಾಲೆ ನೋಡಿ ಎನ್ನುವ ಉಢಾಫೆ ಮಾತುಗಳಾಡಿದರೆ ಸಾಮಾನ್ಯರ ಸ್ಥಿತಿ ಏನಾಗಬೇಕು?

ಎಲ್ಲರೂ ಬಯಸುವುದು‌‌ ಮಕ್ಕಳ ಭವಿಷ್ಯ ಒಳ್ಳೆಯದಾಗಲಿ ಎಂದೆ. ಇತ್ತೀಚೆಗೆ ಸುದ್ದಿಗಳಲ್ಲಿ ಹಲವಾರು ಘಟನೆಗಳ ಬಗ್ಗೆ ಅರಿವು ಮೂಡಿಸಲಾಗಿತ್ತು. ಸ್ಮಾರ್ಟ್ಫೋನ್ ಕೊಡಸದೇ ಇದ್ದ ಅಪ್ಪನ ಮೇಲೆ ರೇಗಾಡಿದ ಮಗಳು, ಮನ ನೊಂದು ಅಪ್ಪ ಆತ್ಮ ಹತ್ಯೆಗೆ ಶರಣು. ತಮ್ಮ ಜೀವನಾಧಾರವಾಗಿದ್ದ ಹಸುವನ್ನೇ ಮಾರಿ ಮತ್ತೊಂದೆಡೆ ತಾಳಿಯನ್ನು‌ ಮಾರಿ ಮೊಬೈಲ್ ಕೊಡಿಸಿದ ಪೋಷಕರು. ಇನ್ನೊಂದೆಡೆ ಮೊಬೈಲ್ ಇದ್ದರೂ ನೆಟ್ವರ್ಕ್ ಇಲ್ಲದೇ ಗುಡ್ಡದ ಮೇಲೆ ಸಣ್ಣ ಬಿಡಾರ ಕಟ್ಟಿ ಆನ್’ಲೈನ್ ತರಗತಿಗೆ ಹಾಜರಾಗುತ್ತಿರುವ ಮಕ್ಕಳು. ಹೀಗೆ ಇನ್ನಷ್ಟು ಘಟನೆಗಳು ನಡೆದಿವೆ, ನಡೆಯುತ್ತಲೇ ಇದೆ‌.

ಹಿರಿಯ ಪ್ರಾರ್ಥಮಿಕ ಮಟ್ಟದಿಂದ ಮೇಲೆ ಇರುವ ಮಕ್ಕಳು ಹೇಗೋ ಇದಕ್ಕೆ ಒಗ್ಗಿಕೊಂಡರೆ ಅದಕ್ಕಿಂತ ಕೆಳಗಿನ ಮಕ್ಕಳ ಕತೆ ಹೇಗೆ? ಮೊಬೈನೊಂದಿಗೆ ಪೋಷಕರೊಬ್ಬರು ಬೇಕೇ ಬೇಕು. ಮಕ್ಕಳು ಓದಿ ಬರೆಯುವುದಕ್ಕಿಂತ ಪೋಷಕರೇ ಓದಿ ಬರೆಯುವುಂತಾಗುತ್ತದೆ.

ಯಾವ ಪೋಷಕರು ಈ ಮೊದಲು ಕಟ್ಟುನಿಟ್ಟಾಗಿ ತಮ್ಮ ಮಕ್ಕಳಿಗೆ ಮೊಬೈಲ್ ಬಳಸದಂತೆ ನೋಡಿಕೊಂಡಿದ್ದರೋ‌ ಅವರೇ ಇಂದು ಮಕ್ಕಳೊಂದಿಗೆ ಕೂತು ಮೊಬೈಲ್ ಪಾಠ ಕೇಳುವಂತೆ ಆಗಿದೆ‌.

ಇಷ್ಟೆಲ್ಲ ಅಡೆತಡೆಗಳು ಇದ್ದರೂ ಸಂಬಂಧ ಪಟ್ಟ ಇಲಾಖೆ ಮಾತ್ರ ಸರಿಯಾದ ನಿಲುವು ತಾಳದೇ ಮೌನವಾಗಿರುವುದು ಎಷ್ಟರ ಮಟ್ಟಿಗೆ ಸರಿ. ಇತ್ತ ಶಿಕ್ಷಣ ಸಂಸ್ಥೆಗಳು ಧನ ಪಿಚಾಚಿಯಂತೆ ಆಡುತ್ತಿದ್ದರೆ. ಶಾಲಾ ಶುಲ್ಕ ಅದರೊಂದಿಗೆ ಮೊಬೈಲ್ ಮತ್ತಿತರ ಪರಿಕರಗಳನ್ನು ಒದಗಿಸಲು ಪೋಷಕರು ಪಡುವ ಕಷ್ಟಗಳು‌ ಇನ್ನೊಂದೆಡೆ. ಇನ್ನಾದರು ಸರಕಾರ ಸರಿಯಾದ ಒಂದು ತೀರ್ಮಾನಕ್ಕೆ ಬಂದರೆ ಎಲ್ಲರಿಗೂ ನೆಮ್ಮದಿ ಎಂದೆನಿಸುತ್ತದೆ.

ಯಾರ ಕೈ ಗೊಂಬೆಯಾಗದೆ, ಗೊಂಬೆಗಳಂತ ಮಕ್ಕಳ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳುವು ಒಳಿತು.

ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು ಎಂಬುದು ಎಂದೆಂದಿಗೂ ಸತ್ಯ.

✍🏻ವಿನೋದ್ ಮೂಡಗದ್ದೆ,

error: Content is protected !!