ಆದ್ಯತಾ ಗುಂಪಿನಲ್ಲಿರುವ ಕಾರ್ಮಿಕರು ಕೋವಿಡ್ ಲಸಿಕೆ ಪಡೆಯಲು ಮನವಿ

ಮಡಿಕೇರಿ ತಾಲ್ಲೂಕಿನಾದ್ಯಂತ ಆದ್ಯತೆ ಗುಂಪಿನಲ್ಲಿರುವ ಕಟ್ಟಡ ಕಾರ್ಮಿಕರು, ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ನಿರ್ವಹಿಸುವವರು, ಹೋಟೆಲ್ ಮತ್ತು ಆತಿಥ್ಯ ಸೇವಾದಾರರಿಗೆ ಹಾಗೂ ಆದ್ಯತೆ ಗುಂಪಿನಲ್ಲಿರುವ ಇತರೆ ಉದ್ಯೋಗಿಗಳಿಗೆ ಜೂನ್ 02 ರಿಂದ ಕೋವಿಡ್-19 ನಿರೋಧಕ ಲಸಿಕೆಯನ್ನು ಮಡಿಕೇರಿ ತಾಲ್ಲೂಕಿನ ಲಸಿಕಾ ಕೇಂದ್ರಗಳಲ್ಲಿ ನೀಡಲಾಗುತ್ತದೆ ಎಂದು ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ಅವರು ತಿಳಿಸಿದ್ದಾರೆ.

ಆದ್ಯತೆ ಗುಂಪಿನಲ್ಲಿರುವ ಕಾರ್ಮಿಕರು ಹಿರಿಯ ಕಾರ್ಮಿಕ ನಿರೀಕ್ಷಕರು, ಮಡಿಕೇರಿ ವೃತ್ತದ ಕಚೇರಿಯಿಂದ ನಮೂನೆ 3 ನ್ನು ಭರ್ತಿ ಮಾಡಿ ಲಸಿಕಾ ಕೇಂದ್ರದಲ್ಲಿ ತೋರಿಸಿ ಕೋವಿಡ್-19 ಲಸಿಕೆಯನ್ನು ತಪ್ಪದೆ ಪಡೆಯುವಂತೆ ಹಿರಿಯ ಕಾರ್ಮಿಕ ನಿರೀಕ್ಷಕರು ಕೋರಿದ್ದಾರೆ.
ಆ ದಿಸೆಯಲ್ಲಿ ಬುಧವಾರ ಮಡಿಕೇರಿ ತಾಲ್ಲೂಕಿನ ವಿವಿಧ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸದ ಸ್ಥಳಗಳಿಗೆ, ಹೋಟೆಲ್‍ಗಳಿಗೆ ಮತ್ತು ಪೆಟ್ರೋಲ್ ಪಂಪ್‍ಗಳಿಗೆ ಭೇಟಿ ನೀಡಿ, ಕೆಲಸದಲ್ಲಿ ತೊಡಗಿರುವ ಎಲ್ಲಾ ಕಾರ್ಮಿಕರುಗಳಿಗೆ ಕಾರ್ಮಿಕ ಕಚೇರಿಯಿಂದ ಅನುಬಂಧ-3 ನ್ನು ತೆಗೆದುಕೊಂಡು ಹೋಗಿ ಕೋವಿಡ್-19 ರ ಲಸಿಕೆಯನ್ನು 18 ವರ್ಷ ವಯೋಮಾನ ಮೇಲ್ಪಟ್ಟವರು ಹಾಕಿಸಿಕೊಳ್ಳುವಂತೆ ಮಾಹಿತಿ ನೀಡಲಾಯಿತು.
ಇಂದಿರಾ ಕ್ಯಾಂಟೀನ್‍ನಲ್ಲಿ ಉಚಿತವಾಗಿ ಉಪಹಾರ, ಮಧ್ಯಾಹ್ನದ ಮತ್ತು ರಾತ್ರಿಯ ಉಟ ಇರುವುದರಿಂದ ಎಲ್ಲಾ ಕಾರ್ಮಿಕರು ಅದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಲಾಯಿತು.

ನಂತರ ಸಂತ ಮೈಕಲರ ಶಾಲೆಯಲ್ಲಿರುವ ಲಸಿಕಾ ಕೇಂದ್ರ ಮತ್ತು ಕಾವೇರಿ ಕಲಾಕ್ಷೇತ್ರದಲ್ಲಿರುವ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಮಿಕರು ಲಸಿಕೆ ಹಾಕಿಸಿಕೊಳ್ಳುವುದನ್ನು ನೋಡಿಕೊಂಡು ಕಾರ್ಮಿಕರಿಗೆ ಧೈರ್ಯ ತುಂಬುವ ಕೆಲಸವನ್ನು ಕಾರ್ಮಿಕ ಅಧಿಕಾರಿ ಅನೀಲ್ ಬಗಟ್ಟಿ, ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ಅವರು ನಿರ್ವಹಿಸಿದ್ದಾರೆ.

error: Content is protected !!