fbpx

ಆಜಾದ್ ಎಂಬ ಝೇಂಕಾರ ಕೇಳಿದ್ದೀರಾ!

ವರ್ಚಸ್ವಿ,

೧೯೧೫ರಲ್ಲಿ ಮಹಾತ್ಮಾಗಾಂಧಿ ಆಫ್ರಿಕಾದಿಂದ ಹಿಂದಿರುಗಿದ ನಂತರ ಭಾರತದಲ್ಲಿ ಹೋರಾಟದ ಒಂದು ಹೊಸ ಸಂಚಲನ ಶುರುವಾಗಿತ್ತು. ೧೯೨೧ರ ಸುಮಾರಿಗೆ ಅಸಹಕಾರ ಚಳುವಳಿಯ ಬೇಗೆ ಇಡೀ ದೇಶವನ್ನುಆವರಿಸಿತ್ತು. ಈ ಸಂದರ್ಭದಲ್ಲಿ ಹದಿನೈದು ವರುಷದ ಯುವಕನೊಬ್ಬ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾಗಿದ್ದ.

ಆತನನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಹಾಜರುಪಡಿಸಿದ್ದ ಪೊಲೀಸರಿಗೆ, ಅಂದು ಒಂದು ಆಶ್ಚರ್ಯ ಕಾದಿತ್ತು. ಆ ಹದಿನೈದು ವರ್ಷದ ಬಾಲಕನ ಉತ್ತರಗಳೂ ಎಲ್ಲರನ್ನೂ ದಿಗ್ಭ್ರಮೆಗೊಳಪಡಿಸಿತ್ತು. ಆತ ತುಂಬಿದ ಕೋರ್ಟ್ ನಲ್ಲಿ ನಿಂತು ತನ್ನ ಹೆಸರನ್ನು “ಆಜಾದ್” ಎಂದು ಝೇಂಕರಿಸಿದ್ದ, ತನ್ನ ತಂದೆಯ ಹೆಸರು ಸ್ವಾತಂತ್ರ ಎಂದು ಮತ್ತು ಬಂದೀಖಾನೆಯನ್ನು ತನ್ನ ಮನೆಯೆಂದು ಪ್ರಶ್ನೆಗಳಿಗೆ ಮೇರು ಧ್ವನಿಯಲ್ಲಿ ಉತ್ತರಿಸಿದ್ದ. ಹದಿನೈದು ಛಡಿ ಏಟುಗಳ ಶಿಕ್ಷೆಗೆ ಗುರಿಯಾದಾಗ ಪ್ರತಿ ಏಟಿಗೆ “ಭಾರತ್ ಮಾತಾ ಕೀ ಜೈ” ಎಂಬ ಕೂಗುಗಳು ಪ್ರತಿಧ್ವನಿಸಿತ್ತು. ಆತನೇ ಆಜಾದ್. ದೇಶಕಂಡ ಅಪ್ರತಿಮ ಸ್ವಾತಂತ್ರ್ಯ ವೀರರಲ್ಲಿ ಒಬ್ಬರಾದ “ಚಂದ್ರಶೇಖರ್ ಆಜಾದ್”.

ಇಂದು ಜುಲೈ ೨೩ ಚಂದ್ರಶೇಕರ್ ಆಜಾದ್ ರ ೧೧೪ನೇ ಜಯಂತಿ. ೨೫ನೇ ವಯಸ್ಸಿಗೆ ಬ್ರಿಟೀಷರ ಬಂಧಿಯಾಗ ಬಯಸದೆ ಅಲಹಾಬಾದಿನಲ್ಲಿ ತನ್ನ ಪಿಸ್ತೂಲಿನ ಗುಂಡುಗಳನ್ನ ತನ್ನ ಶಿರದೊಳಗೆ ಇಳಿಸಿ ಕೊನೆಯುಸಿರೆಳೆದ ಮಹಾನ್ ಹೋರಾಟಗಾರನ ಕುರಿತು ತಿಳಿಸುವ ಸಣ್ಣ ಪ್ರಯತ್ನ ಇಲ್ಲಿ ಮಾಡಿದ್ದೇನೆ.

ಚೌರಿ ಚೌರ ಘಟನೆ ನಂತರ ಗಾಂಧಿ ಅಸಹಕಾರ ಚಳವಳಿಯನ್ನು ಹಿಂಪಡೆದರು. ಇದರ ಪ್ರತಿಫಲವಾಗಿ ಬಹಳಷ್ಟು ಯುವಕರು ಕ್ರಾಂತಿಕಾರಿ ಯೋಜನೆಗಳ ಕಡೆ ಮುಖಮಾಡಿದರು. ಅಂಥವರಲ್ಲಿ ಚಂದ್ರಶೇಕರ್ ಆಜಾದ್ ಮುಂಚೂಣಿಯಲ್ಲಿ ಇದ್ದರು. ರಾಮ್ ಪ್ರಸಾದ್ ಬಿಸ್ಮಿಲ್, ಅಷ್ಫಾಕುಲ್ಲಾ ಖಾನ್, ರೋಷನ್ ಸಿಂಗ್ ಮುಂತಾದ ಕ್ರಾಂತಿಕಾರಿಗಳು ಸೇರಿಕೊಂಡು ಹಿಂದೂಸ್ತಾನ್‌‌ ಪ್ರಜಾಪ್ರಭುತ್ವವಾದಿ ಸಂಘಟನೆಯನ್ನು(HRA) ಸ್ಥಾಪಿಸಿದ್ದರು.

ಅವರುಗಳ ಬಲಿದಾನದ ನಂತರ ಚಂದ್ರಶೇಖರ್ ಆಜಾದ್ ರವರು ಭಗತ್ ಸಿಂಗ್, ಸುಖದೇವ್ ಮುಂತಾದವರೊಂದಿಗೆ ಸೇರಿಕೊಂಡು ಆ ಸಂಘಟನೆಯನ್ನು ಹಿಂದೂಸ್ಥಾನ್ ಸಮಾಜವಾದಿ ಪ್ರಜಾಪ್ರಭುತ್ವವಾದಿ ಸಂಘಟನೆ(HSRA)ಯಾಗಿ ಮರುಜನ್ಮ ನೀಡಿ ಹೋರಾಟವನ್ನು ಮುಂದುವರೆಸಿದ್ದರು. ಈ ಹೋರಾಟಕ್ಕಾಗಿ ದರೋಡೆಗಳ ಮೂಲಕ ಸಂಪತ್ತನ್ನು ಶೇಖರಿಸಲಾಗುತ್ತಿತು.
೧೯೨೫ ರಲ್ಲಿ ನಡೆದ ಕಾಕೋರಿ ರೈಲು ದರೋಡೆ, ನಂತರದಲ್ಲಿ ವೈಸ್‌ರಾಯ್‌ರ ರೈಲನ್ನು ಸ್ಫೋಟಿಸಲು ನಡೆಸಿದ ವಿಫಲ ಯತ್ನದಲ್ಲಿ ಆಜಾದ್ ಸಕ್ರಿಯವಾಗಿ ತಮನ್ನು ತೊಡಗಿಸಿಕೊಂಡಿದ್ದರು.

೧೯೨೮ರಲ್ಲಿ ಯಾವಾಗ ಸೈಮನ್ ಕಮಿಶನ್ ವಿರುದ್ಧದ ಹೋರಾಟದಲ್ಲಿ ಪಂಜಾಬ್ ಕೇಸರಿ ಲಾಲಾ ಲಜಪತ್‌ ರಾಯ್‌‌ ಲಾಠಿ ಏಟಿನಿಂದ ವೀರಮರಣ ಹೊಂದಿದರೋ ಕ್ರಾಂತಿಕಾರಿಗಳ ಪ್ರತೀಕಾರದ ಕಿಚ್ಚು ಇನ್ನಷ್ಟು ಹೆಚ್ಚಿತು. ಇದರ ಫಲವಾಗಿ ಲಾಹೋರ್‌‌ನಲ್ಲಿ ಸಾಂಡರ್ಸ್‌‌ನನ್ನು ಗುಂಡು ಹಾರಿಸಿ ಕೊಲ್ಲುವುದರಲ್ಲಿ ಸಫಲರಾದರು. ಇದರಲ್ಲಿ ಆಜಾದ್ ರವರು ಭಗತ್ ಸಿಂಗ್, ಸುಖದೇವ್ ಮುಂತಾದವರ ಜೊತೆ ಕೈಜೋಡಿಸಿದ್ದರು. ಭಗತ್ ಸಿಂಗ್ ಮತ್ತು ಸಂಗಡಿಗರ ಬಂಧನದ ನಂತರ ಚಂದ್ರಶೇಕರ್ ಆಜಾದ್ ರನ್ನು ಹುಡುಕುವುದರಲ್ಲಿ ಬ್ರಿಟಿಷ್ ಅಧಿಕಾರಿಗಳು ಬಹಳ ಸಮಯ ,ಶಕ್ತಿಯನ್ನು ವ್ಯಹಿಸಿ ಪರದಾಡಿದ್ದರು.

ಆದರೆ ಕಡೆಗೆ ೧೯೩೧ರ ಫೆಬ್ರವರಿ ೨೭ರಂದು, ಚಂದ್ರಶೇಖರ ಆಜಾದ್‌‌‌ ಅಲಹಾಬಾದ್‌‌ನ ಆಲ್‌ಫ್ರೆಡ್‌ ಉದ್ಯಾನದಲ್ಲಿ ತಮ್ಮ ಇಬ್ಬರು ಸಂಗಡಿಗರನ್ನು ಭೇಟಿ ಮಾಡಲು ಬಂದಿರುವ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಇಡೀ ಉದ್ಯಾನವನ್ನು ಸುತ್ತುವರಿದ ಪೊಲೀಸರು ಚಂದ್ರಶೇಖರ ಆಜಾದ್‌‌‌ರಿಗೆ ಶರಣಾಗಲು ಆದೇಶಿಸಿದರು. ಆಜಾದರು ಏಕಾಂಗಿಯಾಗಿ ಹೋರಾಡಿ ಮೂವರು ಪೊಲೀಸರನ್ನು ಕೊಂದರಾದರೂ ಈ ಹೋರಾಟದಲ್ಲಿ ಅವರ ತೊಡೆಗೆ ಗುಂಡೇಟು ಬಿದ್ದಿತು. ತಮ್ಮಲ್ಲಿದ್ದ ಬಹುತೇಕ ಮದ್ದುಗುಂಡುಗಳೆಲ್ಲಾ ಖಾಲಿಯಾದ ನಂತರ, ತಪ್ಪಿಸಿಕೊಳ್ಳಲು ಬೇರೆ ದಾರಿಯಿಲ್ಲವೆಂದು ಮನಗಂಡ ಆಜಾದ್ ರು , ಬ್ರಿಟೀಷರ ಬಂಧಿಯಾಗ ಬಯಸದೆ ತಮ್ಮಲ್ಲಿ ಉಳಿದಿದ್ದ ಕೊನೆಯ ಗುಂಡಿನಿಂದ ತಲೆಗೆ ಗುಂಡು ಹೊಡೆದುಕೊಂಡು ತಮ್ಮ ಹೋರಾಟಕ್ಕೆ ಅಂತ್ಯಹಾಡಿದ್ದರು.

ಹೀಗೆ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಆಜಾದ್ ರ ನೆನಪಲ್ಲಿ ಆ ಉದ್ಯಾನವನ್ನು ಚಂದ್ರಶೇಖರ ಆಜಾದ್‌‌ ಉದ್ಯಾನವೆಂದು ಮರುನಾಮಕರಣ ಮಾಡಿ ಚಂದ್ರಶೇಖರ ಆಜಾದ್‌‌‌ರ ಪ್ರತಿಮೆಯನ್ನು ಅಲ್ಲಿ ಸ್ಥಾಪಿಸಲಾಗಿದೆ. ಇಂತಹ ಸಾವಿರಾರು ನಾವೆಂದಿಗೂ ಒಂದು ಘಳಿಗೆಗೂ ನೆನಪಿಸಿಕೊಳ್ಳದ ಬಲಿದಾನದಿಂದ ನಾವಿಂದು ಸ್ವಾತಂತ್ರ್ಯದ ಗಾಳಿಯನ್ನು ಅನುಭವಿಸುತ್ತಿದ್ದೇವೆ. ಅಂಥವರ ಬಲಿದಾನವನ್ನು ದೇಶವೆಂದಿಗೂ ಮರೆಯದು. ನಾವು ಕೂಡ ಮರೆಯಬಾರದು.
ಜೈ ಹಿಂದ್

•ವರ್ಚಸ್ವಿ, ಹವ್ಯಾಸಿ ಬರಹಗಾರ

error: Content is protected !!