fbpx

ಅ.28 ರಂದು ‘ಕೋಟಿ ಕಂಠ ಗೀತ ಗಾಯನಕ್ಕೆ’ ಕೈಜೋಡಿಸಿ: ಭಂವರ್ ಸಿಂಗ್ ಮೀನಾ

ಮಡಿಕೇರಿ ಅ.17:-ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡ ನಾಡು ನುಡಿ, ಪರಂಪರೆ ಹಾಗೂ ಸಂಸ್ಕøತಿ ಬಿಂಬಿಸುವ ನಿಟ್ಟಿನಲ್ಲಿ ಇದೇ ಅಕ್ಟೋಬರ್, 28 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲೆಯಾದ್ಯಂತ ‘ಕೋಟಿ ಕಂಠ ಗೀತ ಗಾಯನ’ವನ್ನು ಜಿಲ್ಲಾಡಳಿತ, ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ಆಯೋಜಿಸಲಾಗಿದ್ದು, ಪ್ರತಿಯೊಬ್ಬರೂ ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ತಿಳಿಸಿದ್ದಾರೆ. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಕೋಟಿ ಕಂಠ ಗೀತ ಗಾಯನ’ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕಳೆದ ವರ್ಷದಂತೆ ಈ ವರ್ಷವು ವಿಶೇಷವಾಗಿ ರಾಜ್ಯೋತ್ಸವ ಆಚರಿಸಲು ತೀರ್ಮಾನಿಸಿದ್ದು, ಆ ನಿಟ್ಟಿನಲ್ಲಿ ‘ನನ್ನ ನಾಡು-ನನ್ನ ಹಾಡು’ ಎಂಬ ಶೀರ್ಷಿಕೆಯಡಿ ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ನಾಡಗೀತೆಯೊಂದಿಗೆ ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’, ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ಡಾ.ಡಿ.ಎಸ್.ಕರ್ಕಿ ಅವರ ‘ಹಚ್ಚೇವು ಕನ್ನಡದ ದೀಪ’, ನಾಡೋಜ ಡಾ.ಚೆನ್ನವೀರ ಕಣವಿ ಅವರ ‘ವಿಶ್ವ ವಿನೂತನ ವಿದ್ಯಾಚೇತನ’, ಡಾ.ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡುಗಳನ್ನು ಹಾಡಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಕ್ರಮ ಯಶಸ್ಸಿಗೆ ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿಗಳು, ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು.

ಪ್ರತೀ ಗ್ರಾ.ಪಂ.ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಸಾವಿರ ಜನರು ನೋಂದಣಿ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ತಾ.ಪಂ.ಇಒಗಳು ಹೆಸರು ನೋಂದಣಿಗೆ ಮುಂದಾಗಬೇಕು. ಆಯಾಯ ಸ್ಥಳದಲ್ಲಿಯೇ ಏಕಕಾಲಕ್ಕೆ ಒಂದೆಡೆ ಸೇರಿ ಈ ಹಾಡುಗಳನ್ನು ಹಾಡಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.  

ಗ್ರಾ.ಪಂ.ಗಳು, ಶಾಲಾ ಕಾಲೇಜುಗಳು, ವೈದ್ಯಕೀಯ ಕಾಲೇಜು, ಸಂಘ ಸಂಸ್ಥೆಗಳು, ಮಹಿಳಾ ಸಂಘಗಳು, ಕನ್ನಡ ಸಾಹಿತ್ಯ ಪರಿಷತ್ತು, ಉನ್ನತ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಪ್ರೌಢ ಶಾಲಾ ಶಿಕ್ಷಣ ಸಂಜೀವಿನಿ ಸಂಘಗಳು, ಹೀಗೆ ಎಲ್ಲರೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಲಾಗಿರುವ ‘ಕೋಟಿ ಕಂಠ ಗೀತ ಗಾಯನ’  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.
‘ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಿ ಪರಿಣಾಮಕಾರಿಯಾಗಿ ‘ಕೋಟಿ ಕಂಠ ಗೀತ ಗಾಯನ’  ಏರ್ಪಡಿಸುವಂತೆ ಎಲ್ಲಾ ಹಂತದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಸ್ಪಷ್ಟ ನಿರ್ದೇಶನ ನೀಡಿದರು.’ 

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಶಾಲಾ ಕಾಲೇಜುಗಳು, ವೈದ್ಯಕೀಯ ಕಾಲೇಜು, ಹೀಗೆ ಎಲ್ಲೆಡೆ ಕಾರ್ಯಕ್ರಮ ಆಯೋಜಿಸುವಂತಾಗಬೇಕು ಎಂದು ಹೇಳಿದರು. ಇದೊಂದು ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದ್ದು, ಎಲ್ಲರೂ ಕೈಜೋಡಿಸುವಂತೆ ಸೂಚಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಅವರು ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ವಿಶೇಷವಾಗಿ ‘ಕೋಟಿ ಕಂಠ ಗೀತ ಗಾಯನ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲರೂ ಹೆಸರು ನೋಂದಾಯಿಸಿಕೊಳ್ಳಬೇಕು. ಅಕ್ಟೋಬರ್, 28 ರಂದು ಬೆಳಗ್ಗೆ 10.30 ಗಂಟೆಗೆ ಆಯಾಯ ಪ್ರದೇಶದಲ್ಲಿ ಎಲ್ಲರೂ ಒಂದೆಡೆ ಸೇರಿ 11 ಗಂಟೆಗೆ ಏಕಕಾಲದಲ್ಲಿ ಹಾಡಬೇಕಿದೆ. ಇದಕ್ಕಾಗಿ ಎಲ್ಲರೂ ಸಹಕರಿಸುವಂತೆ ಕೋರಿದರು.

ಕರ್ನಾಟಕ ರಾಜ್ಯೋತ್ಸವವನ್ನು ಜಿಲ್ಲೆಯಾದ್ಯಂತ ಜಿಲ್ಲಾಡಳಿತ ವತಿಯಿಂದ ಅತ್ಯಂತ ವಿಶಿಷ್ಟವಾಗಿ ಆಚರಿಸಲು ಉದ್ದೇಶಿಸಲಾಗಿದೆ. ಜಿಲ್ಲೆಯಲ್ಲಿ ಒಂದು ಲಕ್ಷದಷ್ಟು ಜನರು ಆಯಾಯ ಪ್ರದೇಶದಲ್ಲಿಯೇ ಒಂದೆಡೆ ಸೇರಿ ‘ಕೋಟಿ ಕಂಠ ಗೀತ ಗಾಯನ’ ಹಾಡಬೇಕಿದೆ ಎಂದರು.

ಕೋಟಿ ಕಂಠ ಗೀತ ಗಾಯನಕ್ಕೆ ಆನ್‍ಲೈನ್ https://kannadasiri.karnataka.gov.in/kkg/public/ ನಲ್ಲಿ  ನೋಂದಣಿ ಮಾಡಿಕೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುವಂತೆ ಕೋರಿದರು. ಕಾರ್ಯಕ್ರಮದಲ್ಲಿ ಸ್ವಾಗತ, ನಾಡಗೀತೆ ಸೇರಿ 5 ಗೀತೆಗಳನ್ನು ಹಾಡುವುದು, ಸಂಕಲ್ಪ ವಿಧಿ, ವಂದನಾರ್ಪಣೆ ಒಳಗೊಂಡಿದೆ ಎಂದು ಚಿನ್ನಸ್ವಾಮಿ ಮಾಹಿತಿ ನೀಡಿದರು.
ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಷೇಕ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ಆರ್‍ಸಿಎಚ್ ಅಧಿಕಾರಿ ಗೋಪಿನಾಥ್, ಬಿಸಿಎಂ ಅಧಿಕಾರಿ ಎನ್.ಮಂಜುನಾಥ್, ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ನೀರಾವರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಮೋಹನ್ ಕುಮಾರ್, ಇಇ ಪುಟ್ಟಸ್ವಾಮಿ, ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್, ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ಪಲ್ಲೇದ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಪ್ರಮೋದ್, ಜಿ.ಪಂ.ಎಂಜಿನಿಯರ್ ಶ್ರೀಕಂಠಯ್ಯ, ಪಿಎಂಜಿಎಸ್‍ವೈ ಎಂಜಿನಿಯರ್ ಪ್ರಭು, ಸೆಸ್ಕ್ ಎಇಇ ವಿನಯ ಕುಮಾರ್, ತಹಶೀಲ್ದಾರ್ ಮಹೇಶ್ ಇತರರು ಇದ್ದರು.

error: Content is protected !!