fbpx

ಅಶಿಕ್ಷಿತರು ದೇಶಕ್ಕೆ ಹೊರೆ: ಅಮಿತ್ ಶಾ ಹೇಳಿಕೆ

ಅಶಿಕ್ಷಿತ ಜನರು ದೇಶಕ್ಕೆ ಒಂದು ಹೊರೆಯಾಗಿದ್ದಾರೆ ಹಾಗೂ ಅಶಿಕ್ಷಿತರು ಯಾವತ್ತೂ ಭಾರತದ ಉತ್ತಮ ನಾಗರಿಕರಾಗಿರಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಗುಜರಾತ್ ಸೀಎಂ ಆಗಿ ಹಾಗೂ ನಂತರ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರದಲ್ಲಿ 20 ವರ್ಷ ಪೂರೈಸಿದ ಸಂದರ್ಭ ಸಂಸದ್ ಟಿವಿ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಶಾ, ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಹಾಲಿ ಸರಕಾರ ಹೇಗೆ ಶ್ರಮಿಸುತ್ತಿದೆ ಎಂದು ವಿವರಿಸುವ ಸಂದರ್ಭ ಮೇಲಿನ ಮಾತುಗಳನ್ನಾಡಿದ್ದಾರೆ.

ಒಬ್ಬ ಅಶಿಕ್ಷಿತ ವ್ಯಕ್ತಿ ದೇಶಕ್ಕೆ ಹೊರೆ. ಆತನಿಗೆ ಸಂವಿಧಾನ ಪ್ರದತ್ತವಾದ ಹಕ್ಕುಗಳ ಬಗ್ಗೆ ಹಾಗೂ ಆತನಿಂದ ನಿರೀಕ್ಷಿತ ಕರ್ತವ್ಯಗಳ ಬಗ್ಗೆ ತಿಳಿದಿಲ್ಲ. ಇಂತಹ ವ್ಯಕ್ತಿ ಹೇಗೆ ಉತ್ತಮ ನಾಗರಿಕನಾಗಲು ಸಾಧ್ಯ,?” ಎಂದು ಪ್ರಶ್ನಿಸಿದರು.

“ಆ ಸಮಯ (ನರೇಂದ್ರ ಮೋದಿ ಗುಜರಾತ್ ಸೀಎಂ ಆಗಿದ್ದಾಗ) ಶಿಕ್ಷಣವನ್ನು ಅರ್ಧದಲ್ಲಿಯೇ ಕೈಬಿಡುವ ಸಮಸ್ಯೆ ದೊಡ್ಡದಾಗಿತ್ತು. ಅವರು ದಾಖಲಾತಿ ಅಭಿಯಾನವನ್ನು ಹಬ್ಬದಂತೆ ಮಾಡಿ ಅದನ್ನು ಶೇ100ರಷ್ಟು ಸಾಧಿಸಿದರು” ಎಂದು ಶಾ ಹೇಳಿದರಲ್ಲದೆ ಪ್ರಧಾನಿ ನರೇಂದ್ರ ಮೋದಿಯನ್ನು “ಒಬ್ಬ ಪ್ರಜಾಪ್ರಭುತ್ವವಾದಿ ನಾಯಕ” ಎಂದು ಬಣ್ಣಿಸಿದರು.

ಮೋದಿ ಓರ್ವ ಸವಾಧಿಕಾರಿ ನಾಯಕ ಎಂಬ ಆರೋಪಗಳನ್ನು ನಿರಾಕರಿಸಿದ ಶಾ, “ನಾನು ಮೋದಿ ಅವರ ಜತೆಗೆ ನಿಕಟವಾಗಿ ಕೆಲಸ ಮಾಡಿದ್ದೇನೆ ಹಾಗೂ ಅವರ ಕಾರ್ಯಶೈಲಿ ತಿಳಿದಿದ್ದೇನೆ. ಅವರು ಅತ್ಯಂತ ಸಹನೆಯಿಂದ ಆಲಿಸುತ್ತಾರೆ. ಯಾವುದೇ ವಿಚಾರವಿರಲಿ ಎಲ್ಲರ ಮಾತುಗಳನ್ನು ಆಲಿಸುತ್ತಾರೆ ಆದರೆ ತಾವು ಕಡಿಮೆ ಮಾತನಾಡುತ್ತಾರೆ, ನಂತರ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ” ಎಂದರು.

“ತಾವು ಅಧಿಕಾರದಲ್ಲಿರುವುದು ದೇಶದಲ್ಲಿ ಬದಲಾವಣೆ ತರಲು ಕೇವಲ ಸರಕಾರ ನಡೆಸಲು ಅಲ್ಲ ಎಂದು ಮೋದಿ ನಂಬಿದ್ದಾರೆ. ಇದೇ ಕಾರಣದಿಂದ ಅವರು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ” ಎಂದು ಶಾ ಹೇಳಿದರು..

error: Content is protected !!