fbpx

ಅಳಿವಿನಂಚಿಗೆ ಸಾಗುತ್ತಿರುವ ಕೊಡವ ಭಾಷೆಗೆ ಅಕಾಡೆಮಿಯ ಅಣೆಕಟ್ಟು

ಭಾಷೆ ಒಂದು ಶಬ್ದ ಸಂಕೇತ. ವಿಚಾರ ವಿನಿಮಯ ಮಾಡಿಕೊಳ್ಳಲು ಬಳಸುವ ಸದ್ದುಗಳು. ಆ ಸದ್ದುಗಳಿಗೆ ಶಬ್ಧಗಳೆಂಬ ಧ್ವನಿ ಸೇರಿಕೊಂಡವು. ಶಬ್ದಗಳು ಸೇರಿ ವಾಕ್ಯ ರಚನೆಯಾಯಿತು. ಹೀಗೆ ಭಾಷೆಯ ಪಯಣ ಬಹಳ ಧೀರ್ಘವಾದದ್ದು.

ಭಾಷೆಗಳ ನಂತರದಲ್ಲಿ ಅವುಗಳನ್ನು ಗುರುತಿಸಲು ಚಿತ್ರರೇಖೆಗಳು ಹುಟ್ಟಿಕೊಂಡವು. ಆ ಚಿತ್ರರೇಖೆಗಳು ಅಕ್ಷರಗಳಾದವು. ಪ್ರಪಂಚದಲ್ಲಿ ಅದೆಷ್ಟೋ ಭಾಷೆಗಳಿಗೆ ಇಂದಿಗೂ ಲಿಪಿ ಇಲ್ಲ. ಹಾಗೆಯೇ ಸಾವಿರಾರು ಭಾಷೆಗಳು ವಿನಾಶದ ಅಂಚಿನಲ್ಲಿದೆ. ಬಹಳಷ್ಟು ಭಾಷೆಗಳು ಆಧುನಿಕತೆ, ನಗರೀಕರಣ ಮತ್ತಿತ್ಯಾದಿ ಕಾರಣಗಳಿಂದ ತನ್ನ ಅಸ್ತಿತ್ವವನ್ನು ಕಳೆದುಕೊಂಡಿವೆ.

ಇದೀಗ ಕೊಡಗಿನಲ್ಲಿ ಕೊಡವ ಭಾಷೆಯೂ ಕೂಡ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ. ಕೆಲವು ಭಾಷಾ ಪ್ರೇಮಿಗಳು ಹಾಗು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕೆಲವು ಸಂಘಟನೆಗಳು ಮತ್ತು ಕೊಡವ ಭಾಷೆಯ ಪತ್ರಿಕೆಗಳು ಕೊಡವ ಭಾಷೆಯನ್ನು ಉಳಿಸಿ ಬೆಳೆಸಲು ಇನ್ನಿಲ್ಲದ ಶ್ರಮವಹಿಸುತ್ತಿದೆ. ಇದರ ಅಂಗವಾಗಿ ಕರ್ನಾಟಕ ಕೊಡವ ಭಾಷಾ ಸಾಹಿತ್ಯ ಅಕಾಡಮಿ ತೀರಾ ಇತ್ತೀಚೆಗೆ “ಕೊಡವ ತಕ್ಕ್‌ಕ್‌ ತಕ್ಕಾರ” ಎಂಬ ಶಬ್ದಕೋಶವನ್ನು ಪ್ರಕಟಿಸಿದೆ.

ಕೊಡವ ಭಾಷೆಗೆ 5000 ವರುಷಗಳ ತಾಯಿಬೇರು ಇದೆ ಎಂಬುದು ಕೆಲವು ಭಾಷಾ ತಜ್ಞರ ಸ್ಪಷ್ಟ ಅಭಿಪ್ರಾಯ ಕೂಡ ಹೌದು. ಅದರಲ್ಲೂ ಕೊಡಗಿನವರೇ ಆದ ಶ್ರೀಮತಿ ಮಾಳೇಟಿರ ಸೀತಮ್ಮ ವಿವೇಕ್‌ ಎಂಬ ಪುರಾತತ್ವ ಅಧ್ಯಯನಗಾರ್ತಿ ಇವರು, ತೀರ್ಥಂಕರರು ಮತ್ತು ಜೈನರ ಕಾಲದ ಪ್ರಾಕೃತಭಾಷೆಗೂ ಕೊಡವ ಭಾಷೆಗೂ ನಂಟಿದೆ ಎಂಬುದಾಗಿ ಅವರ ಅಧ್ಯಯನ ಬರಹದಲ್ಲಿ ದಾಖಲಿಸಿದ್ದಾರೆ.

ಇತ್ತೀಚೆಗೆ ಸೀತಮ್ಮನವರು ಪಂಚದ್ರಾವಿಡ ಭಾಷೆಗೂ ಪೂರ್ವದ ಭಾಷೆ ಕೊಡವ ಭಾಷೆ ಎಂಬುದಾಗಿ ಸಮಾರಂಭವೊಂದರಲ್ಲಿ ವಿಚಾರ ಮಂಡನೆ ಮಾಡಿದ್ದಾರೆ. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಒಂದನೇ ತೀರ್ಥಂಕರರು ಪ್ರಾಕೃತ ಭಾಷೆಗೆ ಕಂಡುಹಿಡಿದ ಲಿಪಿಯೇ “ಬ್ರಾಮಿ” (ವೃಷಭನಾಥ ಪ್ರಾಕೃತ ಭಾಷೆಗೆ ಲಿಪಿ ಕಂಡುಹಿಡಿದು, ಆ ಲಿಪಿಗೆ ಅವರ ಮಗಳಾದ “ಬ್ರಾಮಿ” ಹೆಸರನ್ನು ಗುರುತುಪಡಿಸಿದರ ಫಲಿತಾಂಶ ಅದು ಬ್ರಾಹ್ಮಿ ಲಿಪಿಯಾಗಿ ಉಳಿದುಕೊಂಡಿದೆ.) ಲಿಪಿ ಎಂಬದಾಗಿ ಇವರು ತಿಳಿಸುತ್ತಾರೆ. ಪ್ರಾಕೃತ ಭಾಷೆಗೂ ಕೊಡವ ಭಾಷೆಯ ಸಾಮ್ಯತೆ, ಕೊಡಗಿನಲ್ಲಿ ಜೈನರು ವಾಸವಿದ್ದ ಕಾಲಘಟ್ಟ ಇತ್ಯಾದಿ ಇತಿಹಾಸದ ದಾಖಲೆಯೊಂದಿಗೆ ಇವರು ವಿಚಾರ ಮಂಡನೆ ಮಾಡಿರುತ್ತಾರೆ. ಹಾಗಾಗಿ ದೀರ್ಘ 5000 ವರುಷಗಳ ಇತಿಹಾಸವಿರುವ ಕೊಡವ ಭಾಷೆಯ ಬಗ್ಗೆ ಕೊಡವ ಭಾಷಿಕರು ಹೆಮ್ಮೆಪಡಬೇಕಿದೆ ಮತ್ತು ಉಳಿಸಿ ಬೆಳೆಸಬೇಕಿದೆ.

ಇದೀಗ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿರುವ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಇವರ ನೇತೃತ್ವದಲ್ಲಿ ಪ್ರಕಟಗೊಂಡಿರುವ “ಕೊಡವ ತಕ್ಕ್‌ಕ್‌ ತಕ್ಕಾರ” ಶಬ್ದಕೋಶ ಭಾಷಾ ಉಳಿವಿಗೆ ಹಾಗು ಬೆಳವಣಿಗೆಗೆ ಒಂದೊಳ್ಳೆಯ ಕಾರ್ಯವಾಗಿದೆ.

469 ಪುಟಗಳಲ್ಲಿ ಅಂದಾಜು 7000ದಷ್ಟು ಪದಗಳನ್ನು ಕೊಡವ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಅಚ್ಚು ಮಾಡಲಾಗಿದೆ. ಅಲ್ಲದೆ ಹುಟ್ಟುವಾಗಲೇ ಮಮ್ಮಿ ಎಂದು ಅಳುತ್ತಾ ಬರುವ ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಇಂಗ್ಲೀಷ್‌ ಲಿಪಿಯಲ್ಲೂ ಕೊಡವ ಶಬ್ದಗಳನ್ನು ಮುದ್ರಿಸಿರುವುದು ಮೆಚ್ಚುವಂತಹದ್ದೇ.
“ಕೊಡವ ತಕ್ಕ್‌ಕ್‌ ತಕ್ಕಾರ”ವನ್ನು ಅಂತರಾಷ್ಟ್ರೀಯ ಸ್ವರ ಮೂಲದ ಲಿಪಿ ವ್ಯವಸ್ಥೆಯೊಂದಿಗೆ ವಿನ್ಯಾಸ ಮಾಡಿರುವುದರಿಂದ ಪ್ರಪಂಚದಾದ್ಯಂತ ಎಲ್ಲರೂ ಕೊಡವ ಭಾಷೆಯನ್ನು ಕಲಿಯಬಹುದು ಎಂಬ ಕನಸ್ಸಿನೊಂದಿಗೆ ಈ ಶಬ್ದಕೋಶವನ್ನು ತರಲಾಗಿದೆ.
ಶ್ರೀ ಸ್ಟೀವನ್‌ ಕ್ವಾಡ್ರಸ್‌ ಪೆರ್ಮುದೆ, ಆಲ್ವಿನ್‌ ಡೆಸಾ, ಶ್ರೀಮತಿ ಗೌರಮ್ಮ ಮಾದಮಯ್ಯ, ಶ್ರೀಮತಿ ಮುಲ್ಲೇಂಗಡ ಬೇಬಿ ಚೋಂದಮ್ಮ, ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ಡಾ. ಶ್ರೀಧರ್‌ ಹೆಗ್ಗಡೆ, ಶ್ರೀ ತೇಲಪಂಡ ಕವನ್‌ ಕಾರ್ಯಪ್ಪ, ಶ್ರೀ ಬಾಚರಣಿಯಂಡ ಅಪ್ಪಣ್ಣ, ರಾಣು ಅಪ್ಪಣ್ಣ, ಶ್ರೀ ಉಳ್ಳಿಯಡ ಪೂವಯ್ಯ, ಶ್ರೀ ಅಜ್ಜಿನಿಕಂಡ ಮಹೇಶ್‌ ನಾಚಯ್ಯ ಇವರುಗಳ ವರ್ಷಾನುಗಟ್ಟಲೆಯ ಶ್ರಮವಿದೆ ಇದರಲ್ಲಿ.

ಕೊಡವ ಭಾಷೆಯನ್ನು ಉಳಿಸಿ ಬೆಳೆಸಲು ಅನ್ಯ ಭಾಷಿಕರು ಉತ್ಸಾಹ ತೋರಿದ್ದಿದೆ. ಅವರುಗಳು ಕೊಡವ ಭಾಷೆಯನ್ನು ಮಾತಾಡುವ ಸಂದರ್ಭದಲ್ಲಿ ಹಲವು ಮೊಂಡು ಮನಸ್ಸುಗಳು ಅವರುಗಳನ್ನು ಕೊಡವ ಭಾಷೆ ಮಾತಾಡದಂತೆ ಹೆದರಿಸಿ-ಬೆದರಿಸಿದ್ದೂ ಇದೆ. ಭಾಷೆ ಉಳಿಸಿ ಬೆಳೆಸಲು ಹೆಚ್ಚು ಹೆಚ್ಚು ಜನರು ಭಾಷೆಯನ್ನು ಆಡಿದಷ್ಟು ಭಾಷೆಗೆ ಒಳಿತು ಎಂಬುದನ್ನು ಮನಗಾಣಬೇಕಿದೆ. ನಮ್ಮದಲ್ಲದ ಇಂಗ್ಲೀಷನ್ನು ಮಾತ್ರ ಭಾಷೆಯಂತೆ ಉಪಯೋಗಿಸುವವರು, ತಮ್ಮ ಭಾಷೆಯನ್ನು ಬೇರೆಯವರೂ ಕಲಿಯಲು ಉತ್ಸುಕರಾಗಿರುವಾಗ, ಅದನ್ನು ತಡೆಯುವುದೆಷ್ಟು ಸರಿ ಎಂದು ತಮಗೆ ತಾವೇ ಪ್ರಶ್ನೆ ಹಾಕಿಕೊಳ್ಳಬೇಕಿದೆ.

ಅಕಾಡೆಮಿಯ ಕಛೇರಿಯಲ್ಲಿ ದೊರೆಯುವ ಈ ಶಬ್ದಕೋಶ ಮೊದಲ ಮುದ್ರಣದಲ್ಲಿ ಒಂದು ಸಾವಿರ ಪ್ರತಿಗಳನ್ನು ಅಚ್ಚು ಹಾಕಿಸಲಾಗಿದೆ. ಭಾಷಾ ಪ್ರೇಮಿಗಳೆಲ್ಲರೂ ಇವುಗಳನ್ನು ಕೊಂಡುಕೊಂಡರೆ, ಮರುಮುದ್ರಣ ಕಾಣುವ ಎಲ್ಲಾ ಸಾದ್ಯತೆಗಳಿವೆ. ಹಾಗೆಯೇ ಭಾಷೆಯನ್ನು ಉಳಿಸಿ ಬೆಳೆಸಲು ಸಹಕಾರವೂ ಆಗುವುದರಲ್ಲಿ ಎರಡು ಮಾತಿಲ್ಲ.

ಕೃಷಿ ಸಂಸ್ಕೃತಿ, ಪರಂಪರೆಗಳ ಉಳಿಸುವಿಕೆ, ಅಲ್ಲಿ ಬಳಸುವ ಭಾಷೆ ಕೂಡ ಭಾಷೆಯ ಭದ್ರತೆಗೆ ಬಂಧುತ್ವ ಒದಗಿಸುತ್ತದೆ.

ಅಕಾಡೆಮಿಯ ದೂರವಾಣಿ ಸಂಖ್ಯೆ: 08272 229074
ಪುಟಗಳು: 4 + 480
ಬೆಲೆ: ರೂ. 500 ಅಲ್ಲಾರಂಡ ವಿಠಲ ನಂಜಪ್ಪ 9448312310

error: Content is protected !!