fbpx

ಅರ್ಥಪೂರ್ಣವಾಗಿ ನಡೆದ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡಮಿಯ ದಶ ವರ್ಷ ಸಂಭ್ರಮ ಕಾರ್ಯಕ್ರಮ

ವರದಿ: ಪಟ್ಟಡ ದೀಕ್ಷಿ

ಕರ್ನಾಟಕ ಸರಕಾರವು ಗ್ರಾಮೀಣ ಭಾಷೆಯಾದ ಅರೆಭಾಷೆ ಬೆಳವಣಿಗೆಯನ್ನು ಸಾಧಿಸುವ ನಿಟ್ಟಿನಲ್ಲಿ ೨೦೧೩ ರಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿತ್ತು . ಹೀಗೆ ಅಕಾಡೆಮಿಯು ಪ್ರಾರಂಭವಾಗಿ ೨೦೨೧ಕ್ಕೆ ಸರಿಯಾಗಿ ದಶ ವರ್ಷಗಳು ತುಂಬಿವೆ. ಹಾಗಾಗಿ ಈ ದಶ ವರ್ಷಗಳು ನೆರವೇರಿದ ಸಂತಸದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಇಂದು ಮಡಿಕೇರಿಯ ಮೇಲಿನ ಗೌಡ ಸಮಾಜದಲ್ಲಿ ದಶ ವರ್ಷ ಸಂಭ್ರಮಾಚರಣೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು . ಈ ಒಂದು ಮಹೋನ್ನತ ಕಾರ್ಯಕ್ರಮ ಮಡಿಕೇರಿ ಗೌಡ ಸಮಾಜದ ಶ್ರೀಮತಿ ಲಲಿತಾ ಮತ್ತು ಶ್ರೀ ತೇನನ ಸೊಮ್ಮಣ್ಣ ವೇದಿಕೆಯಲ್ಲಿ ಜರಗಿತು .

ದಶ ಸಂಭ್ರಮ ಕಾರ್ಯಕ್ರಮ ಉದ್ಘಾಟನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಅಂಗಾರ ಕರ್ನಾಟಕ ಬಂದರು ಮತ್ತು ಮೀನುಗಾರಿಕೆ ಸಚಿವರು ಆಗಮಿಸಿ ಉದ್ಘಾಟಿಸಿದರು . ಕಾರ್ಯಕ್ರಮದಲ್ಲಿ ಕೆ ಆರ್ ಗೋಪಾಲಕೃಷ್ಣ ಭಾವನಾ ಸಂಗೀತ ಬಳಗ ಇವರು ಆಶಯ ಗೀತೆ ಹಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಡಾ .ಕೂಡಕಂಡಿ ದಯಾನಂದ್ ಅವರು ಸ್ವಾಗತಿಸಿದರು .

ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕ ಭಾಷಣ ಮಾಡಿದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪ್ರಸ್ತುತ ಅಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಅರೆಭಾಷೆ ಅಕಾಡೆಮಿ ಸ್ಥಾಪಿಸಲು ಕಾರಣಕರ್ತರಾದ ಎನ್ . ಎಸ್ . ದೇವೀ ಪ್ರಸಾದ್ , ಕೊಡಗಿನ ಜಲಪ್ರಳಯ ಕಾಲದಲ್ಲಿಯೂ ಮಾಜಿ ಅಧ್ಯ್ಷರ ಕೊಲ್ಯದ ಗಿರೀಶ್ ಅವರು ನಿರ್ವಹಿಸಿದ ಕಾರ್ಯಗಳನ್ನು ನೆನೆದರು . ಅಲ್ಲದೆ ತಮ್ಮ ಅವಧಿಯಲ್ಲಿ ತಾವು ಕೊರೋನಾ ಸಂಕಷ್ಟದ ಕಾಲದಲ್ಲಿ ಮಾಡಿದಂತಹ ಅರೆಭಾಷೆ ರಂಗ ಪಯಣ , ಯಕ್ಷಗಾನ ಹಾಡುಗಳ ರಚನೆ , ಸಾಕ್ಷ್ಯ ಚಿತ್ರಗಳ ನಿರ್ಮಾಣಕ್ಕೆ ಸಹಕಾರ , ಅರೆಭಾಷೆ ಹಾಡುಗಳ ರಚನೆ , ಅರ್ಥಕೋಷದ ರಚನೆಗೆ ಸಹಕಾರ , ಬರವಣಿಗೆ ಉತ್ತೇಜಿಸಲು ರಾಷ್ಟ್ರ ಮಟ್ಟದ ಬರಹಗಾರ ವಸುಧೇಂದ್ರ ಅವರಿಂದ ಕಥಾ ಕಮ್ಮಟ ಕಾರ್ಯ್ರಮ ಏರ್ಪಡಿಸಿದ್ದು ಮುಂತಾದ ತಾವು ಸಾಗಿ ಬಂದ ಬಾರಿಯ ಬಗ್ಗೆ ಕಿರು ಪರಿಚಯ ನೀಡಿದರು . ಅಲ್ಲದೆ ನಾವು ಅರೆಭಾಷೆಯನ್ನ ಮಾತನಾಡುವ ಜನರನ್ನು ಮಾತನಾಡಲು ಪ್ರೋತ್ಸಾಹ ಕೊಡಬೇಕು . ಮಗು ಮಲಗಿದ್ದ ತೊಟ್ಟಿಲನ್ನು ತೂಗಲು ಎಲ್ಲರೂ ಸಹಕಾರ ಕೊಡಬೇಕು . ಹಾಗಿದ್ದಾಗ ಮಾತ್ರ ಅರೆಭಾಷೆ ಬೆಳೆಯಲು ಸಹಾಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು . ನಂತರ ಬಂದರು ಮತ್ತು ಮೀನುಗರಿಕಾ ಸಚಿವರಾದ ಎಸ್ ಅಂಗಾರ ಅವರಿಂದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಉದ್ಘಾಟನಾ ಭಾಷಣ ಮಾಡಿದ ಎಸ್ ಅಂಗಾರ ಅವರು ಭಾಷೆಯ ವ್ಯಾಪ್ತಿ ಸಣ್ಣದಾದರೂ ಅದರ ಭಾವನೆ ಅತೀ ದೊಡ್ಡದು . ಅರೆಭಾಷೆ ಎಂಬುದು ಯಾವುದೇ ಪ್ರದೇಶಕ್ಕೆ ಸೀಮಿತ ಆಗಿರಬಾರದು . ಹಾಗಾಗಿ ಒಂದು ದೇಶದ ಕುರಿತಾಗಿ ಭಾಷಾ ಐಕ್ಯತಾ ಭಾವನೆ ಮುಖ್ಯ . ಭಾಷಾ ಭಾವನೆ ಉಳಿಸಿಕೊಳ್ಳಲು ಭಾವನೆ ಮುಖ್ಯ .ಭಾಷಾ ಅಕಾಡೆಮಿ ಇಲ್ಲದೆ ಇದ್ದರೆ ನಾವು ಒಂದು ಕಾರ್ಯ ಕ್ರಮದಲ್ಲಿ ಭಾಗವಹಿಸಲು ಅಸಾದ್ಯ . ದೇಶಕ್ಕೆ ಸಂಬಂಧ ಪಟ್ಟ ಹಾಗೆ ಯಾವುದೇ ಭಾಷೆಗಳು ಇದ್ದರೂ ನಮ್ಮ ಭಾವನೆಗಳು ಒಂದಾಗಬೇಕು . ಒಲಂಪಿಕ್ಸ್ ನಲ್ಲಿ ಭಾರತದ ಹಾಕಿ ತಂಡವನ್ನು ಮುಂದುವರೆಸಿದ ಹೊನ್ನಂಪಾಡಿ ಅಂಕಿತ ಸುರೇಶ್ ಅವರನ್ನು ಉದಾಹರಿಸಿ ಇವರು ದೇಶವನ್ನು ಪ್ರತಿನಿಧಿಸುವವರು ಎಂದರು . ಸಣ್ಣತನವನ್ನು ಬಿಟ್ಟು ದೇಶದ ಭವಿಷ್ಯವನ್ನು ಕುರಿತು ಚಿಂತಿಸಬೇಕು . ಕಡೆಯಲ್ಲಿ ಈ ಒಂದು ಕಾರ್ಯಕ್ರಮ ಅತ್ಯಂತ ಯಶಸ್ವಿ ಆಗಲಿ ಎಂದು ಹರಸಿದರು .

ಕಾರ್ಯಕ್ರಮದಲ್ಲಿ ೪೫ ಡಿಜಿಟಲ್ ಪುಸ್ತಕ ಬಿಡುಗಡೆ ಮಾಡಲಾಯಿತು . ಕೊಡಗು ವಿದ್ಯಾ ಗೌಡ ಸಂಗಡ ಸಾಕ್ಷ್ಯಚಿತ್ರ ಹೊಂಗಿರಣ ಬಿಡುಗಡೆ ಅಂಗಾರ ಅವರಿಂದ . ಎನ್ ಎಸ್ ದೇವೀ ಪ್ರಸಾದ್ ಅವರ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಯಿತು . ಅರೆಭಾಷೆಯ ೮ ಹಾಡುಗಳ ಬಿಡುಗಡೆ , ಹರಿಸೆವೆ ಸಾಕ್ಷ್ಯ ಚಿತ್ರ ಬಿಡುಗಡೆ , ಲೋಕೇಶ್ ಊರುಬೈಲು ಸಂಯೋಜನೆಯ ೮ ಅರೆಭಾಷೆ ಕಥೆಗಳ ಬಿಡುಗಡೆ . ಅಲ್ಲದೆ ಅರೆಭಾಷೆ ಅಕಾಡೆಮಿಯ ವೆಬ್ಸೈಟ್ ಗೆ ಚಾಲನೆ ಕೊಡಲಾಯಿತು.

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಆಯೋಜಿಸಿದ್ದ ಅರೆಭಾಷೆ ಕಥೆ ಸ್ಪರ್ಧೆ , ಕವನ ಸ್ಪರ್ಧೆ ಹಾಗೂ ಲಲಿತಾ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೊಂಬಾರನ ಜಿ ಬೋಪಯ್ಯ ಅವರಿಂದ ಮಡಿಕೇರಿಯ ಕಲಾವಿದರಿಗೆ ವಾದ್ಯ ಪರಿಕರಗಳ ವಿತರಣೆ ಕೂಡ ಮಾಡಲಾಯಿತು. ಕೊಡಗು ಗೌಡ ಸಮಾಜದ ಸಾಕ್ಷ್ಯ ಚಿತ್ರ ನಿರ್ದೇಶಕ ಅನಿಲ್ ಹೆಚ್ . ಟಿ , ದೇವೀ ಪ್ರಸಾದ್ ಅಅವರ ಸಾಕ್ಷ್ಯಚಿತ್ರ ನಿರ್ದೇಶಕ ದುರ್ಗ ಪ್ರಸಾದ್, ಕೆ ಗೋಪಾಲಕೃಷ್ಣ ಅವರಿಗೆ ಹಾಗೂ ಲೋಕೇಶ್ ಊರುಬೈಲು ಅವರುಗಳಿಗೆ ಸಣ್ಣ ಕಿರುಕಾನಿಕಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಒಲಿಂಪಿಕ್ಸ್ ಕೂಟದಲ್ಲಿ ಭಾರತದ ಮಹಿಳಾ ಹಾಕಿ ಟೀಮನ್ನು ಮುಂದುವರಿಸಿದ ಹೊನ್ನಂಪಾಡಿ ಅಂಕಿತಾ ಸುರೇಶ್ ಅವರಿಗೆ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಗೌಡ ಸಮಾಜದ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು . ಮೈಸೂರಿನಿಂದ ಪ್ರಕಟ ಆಗುತಿದ್ದ ಕೊಡಗು ಸಂಗಾತಿ ಪತ್ರಿಕೆಯ ಮೂಲ ಪ್ರತಿಯನ್ನು ಪಟ್ಟಡ ಪ್ರಭಾಕರ ಅವರು ಅಕಾಡೆಮಿ ಅಧ್ಯಕ್ಷರಿಗೆ ಹಸ್ತಾಂತರ ಮಾಡಿದರು.

ಕೊಂಬಾರನ ಜಿ ಬೋಪಯ್ಯ ಮಾತನಾಡಿ ಎಲ್ಲೆ ಇದ್ದರೂ ಹೇಗೆ ಇದ್ದರೂ ಅರೆಭಾಷೆಗನಾಗಿ ಇರಬೇಕು. ಅಕಾಡೆಮಿ ಸ್ಥಾಪಿಸಲು ಕಾರಣಕರ್ತರಾದ ಪ್ರಮುಖರನ್ನು ಸ್ಮರಿಸಿದರು . ಕೊಲ್ಯದದ ಗಿರೀಶ್ ಅವರು ಅರೆಭಾಷೆಯನ್ನು ಡೆಲ್ಲಿಯ ವರೆಗೆ ತಲುಪಿಸುವ ಪ್ರಯತ್ನ ಮಾಡಿದಕ್ಕಾಗಿ ಅವರನ್ನು ಸ್ಮರಿಸಿದರು . ಅಲ್ಲದೆ ತಾವುಗಳು ಸ್ಪೀಕರ್ ಆಗಿದ್ದಾಗ ಹಾಗೂ ಸದಾನಂದ ಗೌಡರು ಮುಖ್ಯಮಂತ್ರಿಗಳು ಆಗಿದ್ದಾಗ ಕಛೇರಿಯಲ್ಲಿಯೇ ಅರೆಭಾಷೆ ಯನ್ನೂ ಮಾತನಾಡುತ್ತಿದ್ದೆವು ಎಂದು ನೆನೆದರು . ಅರೆಭಾಷೆ ಮತ್ತು ಕೊಡವ ಸಮುದಾಯದ ಅಕಾಡೆಮಿಗಳಿಗೆ ಸ್ವಂತ ಕಚೇರಿಗಳ ನಿರ್ಮಾಣ ಆದರೆ ಈ ಎರಡು ಅಕಾಡೆಮಿಗಳು ಒಂದೇ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಆ ಕೆಲಸ ಬೇಗ ನೆರವೇರಲಿ ಎಂದು ಆಶಿಸಿದರು. ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ ಯಾವುದೇ ಸಮುದಾಯದ ಆಚಾರ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಕೆಲಸ ಆಗಬೇಕು . ಹಾಗೆ ಅಕಾಡೆಮಿ ಸ್ಥಾಪಿಸಲು ತಾವು ಭಾಗಿಗಳು ಎಂಬುದಾಗಿ ನೆನೆದರು. ಗುಡ್ಡೇಮನೆ ಅಪ್ಪಯ್ಯ ಗೌಡರ ಪುತ್ಥಳಿಯ ನಿರ್ಮಾಣಕ್ಕೆ ಸಹಕಾರ ಕೊಟ್ಟಿರುವುದಾಗಿ ಸ್ಮರಿಸಿದರು . ಯಾವುದೇ ಸಮಾಜದ ಆಚಾರ ವಿಚಾರಗಳನ್ನು ಪಸರಿಸುವ ಪ್ರಯತ್ನ ಮಾಡಬೇಕು. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮದು. ಯಾವುದೇ ಬೇಧಭಾವ ಇಲ್ಲದೆ ಸಮಾಜದ ಏಕತೆಗೆ ಶ್ರಮಿಸಬೇಕು ಎಂದು ತಿಳಿಸಿದರು.

ಭಾರತದ ಮಹಿಳಾ ಹಾಕಿ ಟೀಂ ಕೋಚ್ ಅಂಕಿತ ಸುರೇಶ್ ಅವರು ಮಾತನಾಡಿ ಮೀಡಿಯಾ ಹಾಗೂ ಪತ್ರಕರ್ತರಿಗೆ ತನ್ನನ್ನು ಗುರುತಿಸಿದಕ್ಕಾಗಿ ಧನ್ಯವಾದ ಸಲ್ಲಿಸಿದರು . ಯಾರೇ ಆದರೂ ಭಾಷಾ ಬೆಳವಣಿಗೆಗೆ ಸಹಕರಿಸಬೇಕು. ಅಲ್ಲದೆ ಎಲ್ಲಾ ಮನೆಗಳಲ್ಲೂ ಒಬ್ಬ ಆಟಗಾರ ಇರಬೇಕು, ಅಲ್ಲದೆ ಸ್ಪೋರ್ಟ್ಸ್ ಗಳ ಬಗ್ಗೆಯೂ ಸಾಕ್ಷ್ಯ ಚಿತ್ರಗಳು ಬರಲಿ ಎಂದು ಆಶಿಸಿದರು. ಸುನೀಲ್ ಸುಬ್ರಮಣಿ ಅವರು ಮಾತನಾಡಿ ಅಕಾಡೆಮಿಗಳು ಸಂಸ್ಕೃತಿಯನ್ನು ಪಸರಿಸುವ ಕಾರ್ಯ ನಿರ್ವಹಿಸಲಿ ಎಂದು ಹರಸಿದರು. ವೀಣಾ ಅಚ್ಚಯ ಅವರು ಮಾತನಾಡಿ ನಾವುಗಳು ಅನೇಕ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಬೇಕು. ನಾವೇಕೆ ಅರೆಭಾಷೆ ಅಭಿವೃದ್ಧಿ ಹಾಗೂ ಕೊಡವ ಭಾಷೆಯ ಅಭಿವೃದ್ಧಿ ನಿಗಮಗಳ ಬೇಡಿಕೆ ಇಡಬಾರದು ಎಂದು ಪ್ರಶ್ನಿಸಿದರು. ನಮ್ಮ ಜನಾಂಗದ ಆರ್ಥಿಕ, ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಎಲ್ಲಾ ಕಾರ್ಯಗಳನ್ನು ಸಮಾಜಕ್ಕೆ ತಿಳಿಸಬೇಕು. ನಮ್ಮ ನಮ್ಮ ಭಾಷೆಗಳನ್ನು ಅರ್ಥ ಮಾಡಿಕೊಳ್ಳಲು ಅರಿಯಬೇಕು. ಮಕ್ಕಳಿಗೆ ಮೊದಲು ಮಾತೃ ಭಾಷೆ ಕಲಿಸಬೇಕು. ಎಲ್ಲಾ ಭಾಷೆಗಳನ್ನೂ ಗೌರವಿಸ ಬೇಕು . ಕೊಡಗಿನ ಉಳಿವಿಗೆ ಎಲ್ಲಾರೂ ಸೇರಿ ಶ್ರಮಿಸಬೇಕು ಎಂದು ತಿಳಿಸಿದರು. ಪಶ್ಚಿಮ ಘಟ್ಟದ ಸಂರಕ್ಷಣಾ ಕಾರ್ಯ ಪಡೆಯ ಅಧ್ಯಕ್ಷರಾದ ರವಿಕುಷಾಲಪ್ಪ ಅವರು ಒಂದು ಭಾಷೆಯ ಆಚಾರ ವಿಚಾರಗಳನ್ನು ಎಲ್ಲರೂ ಸೇರಿ ಉಳಿಸುವ ಪ್ರಯತ್ನ ಮಾಡಿಕೊಂಡು ಬಂದಿದ್ದೇವೆ. ನಾಡಿನ ಸೊಗಡು ಉಳಿದರೆ ಭಾಷಾ ಸೊಗಡು ಉಳಿಯುತ್ತದೆ. ಅರೆಭಾಷೆ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಕೂಡ ಗುರುತಿಸುವ ಹಾಗೆ ಆಗಲಿ . ಕೊಡವ ಮತ್ತು ಅರೆಭಾಷೆ ಅಕಾಡೆಮಿಗಳು ಒಂದೇ ದೃಷ್ಟಿಕೋನದಿಂದ ಕಾರ್ಯ ನಿರ್ವಹಿಸುವ ಹಾಗೆ ಆಗಲಿ. ಅಲ್ಲದೆ ಕೊಡಗಿನಲ್ಲಿ ಸಾಮರಸ್ಯದ ಜೀವನ ನಡೆಸುವಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯಾವುದೇ ಸಂಕಷ್ಟದ ಸಂದರ್ಭಗಳಲ್ಲಿ ಕೊಡಗಿನ ಜನತೆ ಅನ್ಯೋನ್ಯತೆ ಹಾಗೂ ಒಗ್ಗಟಿನಿಂದ ಇರಬೇಕು ಎಂದು ತಿಳಿಸಿದರು . ಮುಂದುವರಿದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಅವರು ಮಾತನಾಡಿ ೨೦೧೩-೧೪ ಗೆ ಕಾಲಘಟ್ಟ ಅಕಾಡೆಮಿಯ ಸುವರ್ಣ ಕಾಲ ಎಂದು ಸ್ಮರಿಸಿದರು . ಪಿ. ಸಿ. ಜಯರಾಂ ಅವರು ದಶ ವರ್ಷಗಳಲ್ಲಿ ಅರೆಭಾಷೆ ದಶ ದಿಕ್ಕುಗಳಿಗೆ ಹಬ್ಬಿದೆ ಎಂದು ಸಂತಸ ವ್ಯಕ್ತ ಪಡಿಸಿದರು . ಸೂರ್ತಲೆ ಸೋಮಣ್ಣ ಅರೆಭಾಷೆ ಅಕಾಡೆಮಿಯ ಸ್ಥಾಪನೆಗೆ ಶ್ರಮಿಸಿದ ಎಲ್ಲಾ ಸಾಧಕರನ್ನು ಸ್ಮರಿಸಿ ಅವರುಗಳಿಗೆ ಅಭಿನಂದನೆ ಸಲ್ಲಿಸಿದರು . ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪ್ರಸ್ತುತ ಅಧ್ಯಕ್ಷರಾದ ಶ್ರೀಯುತ ಲಕ್ಷ್ಮಿನಾರಾಯಣ್ ಕಜೆಗದ್ದೆ ಅವರನ್ನು ಮಾತಿನ ಮದ್ಯೆ “ಡಿಜಿಟಲ್ ಅಧ್ಯಕ್ಷ” ಎಂದು ಸಂಬೋಧಿಸಿದರು. ಅಲ್ಲದೆ ಅಂಕಿತ ಸುರೇಶ್ ಅವರಿಗೂ ವಂದಿಸಿದರು . ಮಡಿಕೇರಿಯ ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ ಹತ್ತನೆ ವರ್ಷದ ಸಮಾರಂಭ ಉದ್ದೇಶಿಸಿ ಅಕಾಡೆಮಿಯ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಎಲ್ಲಾ ರೀತಿಯ ಬೆಂಬಲ ಕೊಡುವುದಾಗಿ ತಿಳಿಸಿದರು . ಕಾರ್ಯಕ್ರಮದ ಕಡೆಯಲ್ಲಿ ಪ್ರಸ್ತುತ ಅಧ್ಯಕ್ಷರಾದ ಲಕ್ಮಿನಾರಯಣ ಕಾಜೆಗದ್ದೆ ಅವರು ಕೊರೋನಾದ ಸಂಕಷ್ಟದ ಕಾಲದಲ್ಲೂ ಅಕಾಡೆಮಿ ಎಲ್ಲಿಯೂ ಸಂಸ್ಕೃತಿಗೆ ಚ್ಯುತಿ ಬಾರದೆ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಂದಿದೆ . ಅರೆಭಾಷೆ ಸಂಸ್ಕೃತಿ ಶಿಬಿರಗಳನ್ನು ನಾಡಿನ ಎಲ್ಲಾ ಭಾಗಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ . ರಾಜಕೀಯ ಕ್ಷೇತ್ರ ಅಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ಅರೆಭಾಷೆ ಜನಾಂಗದ ಜನತೆ ಗುರುತಿಸಿಕೊಳ್ಳುವ ಹಾಗೆ ಆಗಬೇಕು . ಅದಕ್ಕಾಗಿ ಅಕಾಡೆಮಿಯನ್ನು ಎಲ್ಲಾರೂ ಬಳಸಿಕೊಳ್ಳಬೇಕು . ಅರೆಭಾಷೆ ಬರವಣಿಗೆ ಭೌತಿಕ ಕ್ಷೇತ್ರದಲ್ಲಿ ಆಚ್ಚಾಗಬೇಕು ಎಂದು ತಿಳಿಸಿದರು . ಕಾರ್ಯಕಮದ ವಂದನಾರ್ಪಣೆಯನ್ನು ಅಕಾಡೆಮಿಯ ರಿಜಸ್ಟ್ರಾರ್ ಆದ ಚಿನ್ನಸ್ವಾಮಿ ಅವರು ನಿರ್ವಹಿಸಿದರು , ಕಡೆಯಲ್ಲಿ ಗೋಪಾಲಕೃಷ್ಣ ಅವರ ಹಾಡಿನ ಮೂಲಕ ದಶ ಸಂಬ್ರಮ ಉದ್ಘಾಟನಾ ಕಾರ್ಯಕ್ರಮ ಮುಕ್ತಾಯ ಆಯಿತು .

ಈ ಕಾರ್ಯಕ್ರಮದಲ್ಲಿ ಬಂದರು ಮತ್ತು ಮೀನುಗಾರಿಕೆ ಸಚಿವರಾದ ಅಂಗಾರ, ಪಶ್ಚಿಮ ಘಟ್ಟದ ಸಂರಕ್ಷಣಾ ಕಾರ್ಯ ಪಡೆಯ ಅಧ್ಯಕ್ಷರಾದ ರವಿಕುಶಾಲಪ್ಪಾ, ಮಡಿಕೇರಿ ವಿಧಾನ ಸಭಾ ಸದ್ಯಸ್ಯ ಎಂ ಪಿ ಅಪ್ಪಚ್ಚು ರಂಜನ್, ವಿರಾಜಪೇಟೆ ತಾಲ್ಲೂಕಿನ ವಿಧಾನ ಸಭಾ ಸದಸ್ಯರಾದ ಕೆ ಜಿ ಬೋಪಯ್ಯ , ವಿಧಾನ ಪರಿಷತ್ತು ಸದಸ್ಯರುಗಳಾದ ವೀಣಾ ಅಚ್ಚಯ್ಯ ಹಾಗೂ ಸುನೀಲ್ ಸುಬ್ರಮಣಿ, ಭಾರತದ ಮಹಿಳಾ ಹಾಕಿ ತಂಡದ ಕೋಚ್ ಹೊನ್ನಂಪಾಡಿ ಅಂಕಿತ ಸುರೇಶ್, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರುಗಳಾದ ಪಿ. ಸಿ ಜಯರಾಂ, ಕೊಲ್ಯದ ಗಿರೀಶ್ , ಹಾಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಮಡಿಕೇರಿ ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಎಲ್ಲಾ ಸದಸ್ಯರು , ರಿಜಿಸ್ಟ್ರಾರ್ ಚಿನ್ನಸ್ವಾಮಿ, ಅರೆಭಾಷೆ ಅಭಿಮಾನಿಗಳು ಉಪಸ್ಥಿತರಿದ್ದರು.

error: Content is protected !!