ಅರ್ಚಕ ವೃತ್ತಿಯನ್ನು ಬ್ರಾಹ್ಮಣ ಸಮುದಾಯಕ್ಕೆ ಮೀಸಲಿಡಬೇಕು: ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ

ಮೈಸೂರು: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಿಗೆ ರಾಜ್ಯ ಸರ್ಕಾರವು ಸಮಾಜದ ಎಲ್ಲಾ ವರ್ಗದ ಜನರನ್ನು ಅರ್ಚಕರನ್ನಾಗಿ ನೇಮಿಸುತ್ತಿದೆ, ಸರ್ಕಾರ ಹೀಗೆ ಮಾಡದೇ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಅರ್ಚಕ ಉದ್ಯೋಗವನ್ನು ಮೀಸಲಿಡಬೇಕು ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಜಿ ತಿಳಿಸಿದ್ದಾರೆ.

ಮೈಸೂರಿನ ಖಾಸಗಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ವಿಪ್ರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರ್ಚಕ ವೃತ್ತಿಯನ್ನು ಬ್ರಾಹ್ಮಣರಿಂದ ಕಿತ್ತು ಕೊಳ್ಳುವ ಪ್ರಯತ್ನ ಸರ್ಕಾರದಿಂದ ನಡೆಯುತ್ತಿದ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಇತ್ತೀಚಿಗೆ ಬಿಡುಗಡೆಯಾದ ಕನ್ನಡ ಸಿನಿಮಾವೊಂದರಲ್ಲಿ ಬ್ರಾಹ್ಮಣರನ್ನು ಅವಹೇಳನವಾಗಿ ತೋರಿಸಲಾಗಿತ್ತು.

ಇಂತಹ ಘಟನೆ ಇದೇ ಮೊದಲಲ್ಲ. ಇದಕ್ಕೆ ಪ್ರತಿರೋಧ ನಡೆದಿದ್ದು ಒಳ್ಳೆಯ ಬೆಳವಣಿಗೆಯಾಗಿದ್ದು, ಸಮಾಜ ಜಾಗೃತವಾಗಿದೆ ಎಂಬುದಕ್ಕೆ ಉದಾಹರಣೆ. ಅಭಿಮಾನ ಶೂನ್ಯ ಸಮಾಜ ಹೆಚ್ಚು ದಿನಕಾಲ ಬದುಕುವುದಿಲ್ಲ. ಸಿನಿಮಾ ಅವಹೇಳನ ದೃಶ್ಯ ಸಮಾಜದ ಎಲ್ಲರನ್ನೂ ಒಗ್ಗೂಡುವಂತೆ ಮಾಡಿದೆ ಎಂದರು.

ಬ್ರಾಹ್ಮಣರಿಗೆ ಅರ್ಚಕರ ವೃತ್ತಿಯಲ್ಲಿ ಮುಂದುವರಿಯಲು ಅವಕಾಶ ಕೊಡದಿರುವುದು ಬೇಸರದ ಸಂಗತಿ. ಸರ್ಕಾರ ಬ್ರಾಹ್ಮಣರಿಂದ ಅರ್ಚಕ ವೃತ್ತಿಯನ್ನು ಕಿತ್ತು ಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಈ ಎಲ್ಲಾ ಸಮಸ್ಯೆಗಳೊಳಗೆ ಪರಿಹಾರ ಕಂಡುಕೊಳ್ಳಲು ಸಂಘಟನೆಯೊಂದೇ ಪರಿಹಾರ. ನಮ್ಮ ಮೇಲೆ ದಾಳಿ ಮಾಡುತ್ತಿರುವವರ ವಿರುದ್ಧ ಹೋರಾಡಲು ಸಂಘಟನೆ ಅತ್ಯವಶ್ಯ ಎಂದು ಪ್ರತಿಪಾದಿಸಿದರು.

ಮಂದಿರ ನಿರ್ಮಾಣಕ್ಕೆ 1,500 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ 2,100 ಕೋಟಿ ರೂ. ಸಂಗ್ರಹವಾಗಿದೆ. ಮಂದಿರ ನಿರ್ಮಾಣ ಮಾಡುವುದು ದೊಡ್ಡ ವಿಷಯವೇನಲ್ಲ. ಆದರೆ ಇಷ್ಟು ಆಸ್ಥೆಯಿಂದ ನಿರ್ಮಿಸಿದ ಮಂದಿರವನ್ನು ಎಷ್ಟು ದಿವಸ ಉಳಿಸಿಕೊಳ್ಳುತ್ತೇವೆ ಎಂಬುದು ಮುಖ್ಯ.

ಶ್ರೀ ರಾಮನ ಹೆಸರಿನಲ್ಲಿ ನಮ್ಮ ಸಂಸ್ಕೃತಿ ಪುನರುತ್ಥಾನವಾಗಬೇಕು. ನೀವು ಕಟ್ಟಿದ ಮಂದಿರ ಅದೆಷ್ಟು ಕಾಲ ನಿಮ್ಮ ಕೈಯಲ್ಲಿ ಉಳಿಯುತ್ತದೆ? ಅದು ಮತ್ತೆ ನಮ್ಮ ಕೈಗೆ ಬಂದೇ ಬರುತ್ತದೆ ಎಂಬ ಹೇಳಿಕೆಗಳನ್ನು ಹುಸಿಗೊಳಿಸಬೇಕು ಎಂದು ಹೇಳಿದರು

error: Content is protected !!