ಅರಣ್ಯ ರಕ್ಷಕನಾಗಿ ಹುತಾತ್ಮನಾದ ಮಹತ್ಮನ ನೆನಪು…

ರಾಷ್ಟ್ರೀಯ ಅರಣ್ಯ ಸಿಬ್ಬಂಗಳ ಹುತಾತ್ಮರ ದಿನಾಚರಣೆ ಪ್ರಯುಕ್ತ ವಿಶೇಷ ಲೇಖನ
°ಇದು ಕಾಡುಗಳ್ಳ, ದಂತಛೋರನಿಂದ ಭೀಕರವಾಗಿ ಹತ್ಯೆಯಾದ ರಿಯಲ್ ಹೀರೋ ಅರಣ್ಯ ಅಧಿಕಾರಿಯೊಬ್ಬರ ಕಹಾನಿ!

ಅದೇನೋ ಗೊತ್ತಿಲ್ಲ…ಈ ಅಧಿಕಾರಿಯನ್ನು ನೆನಪು ಮಾಡಿಕೊಳ್ಳಬೇಕಾಗಿದೆ. ನಾನು ಅಂದು ಸುವರ್ಣ ನ್ಯೂಸ್ ಸುದ್ದಿವಾಹಿಯಲ್ಲಿ ಚಾಮರಾಜನಗರ ಜಿಲ್ಲಾ ವರದಿಗಾರಿಕೆ ಮಾಡುತ್ತಿದ್ದ ಕಾಲವದು. ಹೊಗೇನಕಲ್ ವಿವಾದದ ಸಂದರ್ಭ ನಾನು ಮತ್ತು ನನ್ನ ಕ್ಯಾಮರಾಮನ್ ಆಗಿದ್ದ ಪುಟ್ಟರಾಜು ಜೊತೆ ವಿವಾದಿತ ಪ್ರದೇಶವಾದ ಹೊಗೇನಕಲ್ ಜಲಪಾತದ ವಿವಾದಿತ ಪ್ರದೇಶದ ಕಡೆ ಹೋಗಿ ಬರೋಣ ಎಂದು ಜಿಲ್ಲಾ ಕೇಂದ್ರ ಚಾಮರಾಜನಗರದಿಂದ ಮಹದೇಶ್ವರ ಬೆಟ್ಟ ದಾಟಿ ಮುಂದೆ ಸಾಗಿ ಸ್ವಲ್ಪ ದಣಿವಾರಿಸಿಕೊಳ್ಳುವುದಕ್ಕೆ ಒಂದು ಕುಗ್ರಾಮದಲ್ಲಿ ನಿಲ್ಲಿಸಿದೆವು ಅಲ್ಲಿ ಚಹಾದಂಗಡಿಯ ಗೋಡೆಯಲ್ಲಿ ಒಬ್ಬ ಸಣಕಲು ದೇಹದ,ಕುರುಚಲು ಗಡ್ಡದ,ಸಮವಸ್ತ್ರಧಾರಿ ವ್ಯಕ್ತಿಯ ಪೋಟೋ ನೋಡಿದೆ.

ಹಿಂದೆಂದೂ ಅವರನ್ನು ನೋಡಿದಂಗೆ ಇರಲಿಲ್ಲ ಯಾರದು ಎಂದು ಕುತೂಹಲದಿಂದಲೇ
ಅಂಗಡಿಯವರಲ್ಲಿ ಕೇಳಿದೆ ಅವರಿಂದ ಬಂದ ಉತ್ತರ ಏನು ಗೊತ್ತಾ..? “ನಮ್ಮ ಊರಿನ ಸಾಮಿ” ಇನ್ನೂ ಕುತೂಹಲ ಹೆಚ್ಚಾಗಿ ಇನ್ನಷ್ಟು ಮಾಹಿತಿ ಪಡೆದುಕೊಳ್ಳಲು ತಯರಾದೆ ಅದಾಗ ತಿಳಿಯಿತು ಆ ಅಧಿಕಾರಿಯ ಫೋಟೋ ಗ್ರಾಮದ ಪ್ರತಿಯೊಬ್ಬರ ಮನೆಯಲ್ಲೂ ಇದೆ ಎಂದು ಇನ್ನು ಇವರ ಫೋಟೋ ಗ್ರಾಮದ ಮಾರಿಯಮ್ಮ ದೇವಾಲಯದಲ್ಲೂ ಇರಿಸಿ ದಿನನಿತ್ಯ ಪೂಜಿಸುತ್ತಾರೆ ಎಂದು ಅಂದಹಾಗೆ ಈ ಗ್ರಾಮ ಇರುವುದು ಹೂಗೇನಕಲ್ ಬಳಿಯ ಕಾಡುಗಳ ನರಹಂತಕನ ವೀರಪ್ಪನ್ ಹುಟ್ಟೂರು ಗೋಪಿನಾಥಂ,ಆದರೆ ಆ ಭಾವಚಿತ್ರ ಯಾರದು ಅಂದುಕೊಂಡಿರಾ ಐ.ಎಫ್.ಎಸ್ ಅಧಿಕಾರಿ ಪಿ.ಶ್ರೀನಿವಾಸ್ ಅವರದ್ದು ಆಗಿತ್ತು.

ಯಾರಿದು ಶ್ರೀನಿವಾಸನ್…?

ಪಂಡಿಲ್ಲಪಲ್ಲಿ ಶ್ರೀನಿವಾಸ್ ಅವರು ಕೇವಲ ಒಬ್ಬ ಸಾಮಾನ್ಯ ಅರಣ್ಯ ಅಧಿಕಾರಿಗಳಾಗಿರಲಿಲ್ಲ. ಭಾರತೀಯ ಅರಣ್ಯಗಳ ಸಂರಕ್ಷಣೆ ವಿಚಾರ ಬಂದಾಗ ಅವರದು ದೊಡ್ಡ ಹೆಸರು. ಅತ್ಯಂತ ದುರ್ಗಮ ಹಾಗು ದೂರದ ಸಂಕೀರ್ಣ ಜನ ವಾಸವಿದ್ದ ಪ್ರದೇಶಗಳಿಗೂ ರಸ್ತೆಗಳ ಸಂಪರ್ಕ ಕಲ್ಪಿಸಿದವರು. ಅಸಹಾಯಕ ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಕಾಲುವೆಗಳನ್ನು ನಿರ್ಮಿಸಿ ಕುಡಿಯುವ ನೀರಿನ ಸಂಪರ್ಕವನ್ನು ಒದಗಿಸಿದರು. ಮೊಬೈಲ್ ವೈದ್ಯಕೀಯ ದವಾಖಾನೆಗಳನ್ನು ತೆರೆದು, ಬಡವರ ಆರೋಗ್ಯದ ಕಾಳಜಿ ವಹಿಸಿದ್ದರು. ಸುಮಾರು 40 ಸೂರಿಲ್ಲದ ಕುಟುಂಬಗಳಿಗೆ ಮನೆಗಳನ್ನು ನಿರ್ಮಾಣ ಮಾಡಿ ಕೊಟ್ಟರು. ಇದೆಲ್ಲವನ್ನು ತಮ್ಮದೇ ಸ್ವಂತ ಹಣದಲ್ಲಿ ಮಾಡಿದ್ದರು ಛಲದಂಕ ವೀರನಂತೆ!
ಬಡತನ, ಮೂಲಭೂತ ಸೌಕರ್ಯದ ಕೊರತೆಗಳಿಂದ ಬೇಸತ್ತು, ವ್ಯವಸ್ಥೆಯ ವಿರುದ್ಧ ಬಂಡಾಯವೆದ್ದು, ನಕ್ಸಲಿಸಂನಂತಹ ಪಿಡುಗಿನತ್ತ ತಿರುಗುತ್ತಿದ್ದ ಸುಮಾರು 120 ಮಂದಿಯ ಬೇಡಿಕೆಗಳನ್ನು ಈಡೇರಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದಿದ್ದರು. ಅರಣ್ಯ ಹಾಗು ವನ್ಯ ಜೀವಿ ಸಂಪತ್ತಿನ ಸಂರಕ್ಷಣೆ ಹಾಗು ಉಳಿವಿಗೆ ಅವರು ಅವಿರತ ಜಾಗೃತಿಯನ್ನು ಮಾಡುತ್ತಲೇ ಇದ್ದರು.
ಪಿ.ಶ್ರೀನಿವಾಸ್,ಐಎಫ್ ಎಸ್ ಅಧಿಕಾರಿ ಡಿಸಿಎಫ್ ಹುದ್ದೆಯಲ್ಲಿದ್ದುಕೂಂಡು ಕಾಡುಗಳ್ಳ ವೀರಪ್ಪನ್ ಅಟ್ಟಹಾಸವಿದ್ದ ಸಂದರ್ಭ ಕಾವೇರಿ ವನ್ಯಧಾಮದಲ್ಲಿ ಕರ್ತವ್ಯದಲ್ಲಿದ್ದಾಗ ಎರಕೆಯಂ ಎನ್ನು ಅರಣ್ಯ ಪ್ರದೇಶದಲ್ಲಿ ವೀರಪ್ಪನ್ನಿನಿಂದ ಅತ್ಯಂತ ಬರ್ಬರವಾಗಿ ಹತ್ಯೆಯಾದರು. ಕಣ್ಣಿನಲ್ಲಿ ರಕ್ತ ಇಲ್ಲದವನಂತೆ ಕ್ರೂರಿ ಕಾಡುಗಳ್ಳ ಅವರ ರುಂಡ ಮುಂಡ ಬೇರ್ಪಡುವಷ್ಟರ ಮಟ್ಟಿಗೆ ತನ್ನ ಪೈಶಾಚಿಕತೆಯನ್ನು ಮೆರೆದಿದ್ದ…!

ಮೊಟ್ಟಮೊದಲ ಬಾರಿಗೆ ಆನೆಗಳ ಹತ್ಯೆ ಮತ್ತು ಗಂಧದ ಮರ ಲೂಟಿ ಪ್ರಕರಣಕ್ಕೆ ಸಂಬಂಧ ಮೂದಲ ಭಾರಿಗೆ ಬಂಧಿಸಿದ್ದು ಇದೇ ಶ್ರೀನಿವಾಸನ್ 1986ರಲ್ಲಿ. ಬಳಿಕ ವೀರಪ್ಪನನ್ನು ಬೂದಿಪಡ್ಗ ಎನ್ನುವ ವಸತಿಗೃಹದಲ್ಲಿ ಅವನನ್ನು ವಶದಲ್ಲಿ ಇಡಲಾಗಿತ್ತು. ಭದ್ರತೆ ಇದ್ದರೂ ಕ್ರೂರಿ ವೀರಪ್ಪನ್ ತಲೆಗೆ ಹಚ್ಚಿಕೊಳ್ಳಲು ಕೊಬ್ಬರಿ ಎಣ್ಣೆ ಬೇಕು ಎಂದು ನೆಪ ಹೇಳಿ ತಪ್ಪಿಸಿಕೊಂಡು ಕಾಡಿನಲ್ಲಿ ಕಣ್ಮರೆಯಾಗಿಬಿಟ್ಟಿದ್ದ. ಆ ಕಾರಣಕ್ಕೆ ಶ್ರೀನಿವಾಸ್ ರನ್ನು ಚಿಕ್ಕಮಗಳೂರಿಗೆ ವರ್ಗಾವಣೆ(punishment) ಮಾಡಲಾಯಿತು. ಬಳಿಕ ಕೇರಳ,ತಮಿಳುನಾಡಿಗೂ ವರ್ಗ ಮಾಡಲಾಯಿತ್ತಾದರೂ ಮತ್ತೆ ವೀರಪ್ಪನ್ ನನ್ನು ಮಟ್ಟ ಹಾಕಲು ಕಾವೇರಿ ವನ್ಯಧಾಮಕ್ಕೆ ವರ್ಗಾಯಿಸಿಕೊಂಡಿದ್ದರು.


ಪಿ.ಶ್ರೀನಿವಾಸನ್ ಅವರ ಕುರಿತು ಕಣ್ಣು ಕೆಂಪಾಗಿಸಿದ್ದ ದಟ್ಟ ಮೀಸೆಯ ದುಷ್ಟ


ಪಿ. ಶ್ರೀನಿವಾಸ್ ಅವರು ವೀರಪ್ಪನ್ ನೆಲೆಸಿದ್ದ ಗ್ರಾಮ ಹಾಗು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಗ್ರಾಮಸ್ಥರು ಅರಣ್ಯದ ಉಪ ಉತ್ಪನ್ನಗಳ ಮಾರಾಟ ಮಾಡಲು ಹಾಗು ಅದರಿಂದ ದುಡಿಯಲು ಸಹಕಾರ, ಪ್ರೋತ್ಸಾಹ ನೀಡಿದರು. ಆ ಮೂಲಕ ಅರಣ್ಯಕ್ಕೆ ಈ ಜನರು ಮಾರಕವಾಗುವುದನ್ನು ತಪ್ಪಿಸಲಾಯಿತು. ನಂತರ ವೀರಪ್ಪನ್ ಪಡೆಯಲ್ಲಿದ್ದವರು ಕಾನೂನಾತ್ಮಕವಾಗಿ ಶರಣಾಗಿ ಅಪರಾಧಗಳಿಂದ ಮುಕ್ತವಾಗುವ ಅವಕಾಶ ನೀಡಲಾಯಿತು. ಇದೆಲ್ಲದರಿಂದ ವೀರಪ್ಪನ್ ಗಿಂತಲೂ ಜಾಸ್ತಿ ಜನ ಮನ್ನಣೆಯನ್ನು ಪಡೆದರು ಶ್ರೀನಿವಾಸನ್.

ಪರಿಣಾಮ 1990 ಹೊತ್ತಿಗೆಲ್ಲಾ ವೀರಪ್ಪನ್ ತಂಡದ ಘಟಾನುಘಟಿಗಳೆಲ್ಲಾ ಶರಣಾಗಿ ಸಮಾಜದಲ್ಲಿ ಸಾಮಾನ್ಯರಂತೆ ಸಭ್ಯ ಜೀವನ ನಡೆಸಲು ಮುಂದಾಗಿದ್ದರು. ಆದ್ದರಿಂದ ವೀರಪ್ಪನ್ ಪಡೆಯು 40 ಸದಸ್ಯರಿಂದ ಕೇವಲ 8-10 ಮಂದಿಗೆ ಇಳಿದು ಬಿಟ್ಟಿತ್ತು. ಇದು ವೀರಪ್ಪನ್ ತಲೆನೋವಿಗೆ ಹಾಗು ಕಣ್ಣು ಕೆಂಪಾಗಲು ಕಾರಣವಾಗಿ ಬಿಟ್ಟಿತ್ತು. ಶ್ರೀನಿವಾಸನ್ ಅವರಿಂದ ತನ್ನ ಬಲ ಕಡಿಮೆ ಆಗುತ್ತಿರುವುದಕ್ಕೆ ಅವರ ವಿರುದ್ಧ ತೀರಾ ನೀಚ್ಛನಂತೆ ಪ್ರತೀಕಾರ ತೀರಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದ ದಪ್ಪ ಮೀಸೆಯ ಕಾಡು ಕಠೋರಿ!
ಮುಳುವಾದ ಒಳ್ಳೆತನ:

ವೀರಪ್ಪನ್ ನ ಕ್ರೂರ ಕೃತ್ಯಕ್ಕೆ ಕಾರಣವಾಗಿದ್ದೇ ಶ್ರೀನಿವಾಸ್ ರವರ ಒಳ್ಳೆತನ.ಅರಣ್ಯಾಧಿಕಾರಿ ಆದರೇನಂತೆ ತನ್ನ ಬಳಿಯಿದ್ದ ವೈದಕೀಯ ಚಾಣಾಕ್ಷ್ಯತೆಯಿಂದ ಗೋಪಿನಾಥಂನಲ್ಲಿ ವೈದ್ಯರಾದರು,ಪುಟ್ಟದೊಂದು ಶಾಲೆ ಕಟ್ಟಿಸಿದ್ದರು,ಗುಡಿಸಿಲಿನಲ್ಲಿ ವಾಸಿಸುತ್ತಿದ್ದ 40 ಕುಟುಂಬಗಳಿಗೆ ತನ್ನ ಸ್ವಂತ ಸಂಬಳದಲ್ಲೇ ಮನೆ ನಿರ್ಮಿಸಿದ್ದರು. ಹಾಗೆ ವೀರಪ್ಪನ್ ತಂಡದಲ್ಲಿದ್ದ ಗ್ರಾಮದ ಕೆಲವು ಮಂದಿಯನ್ನು ಮನವೊಲಿಸುತ್ತಿದ್ದದ್ದು ಮುಳುವಾಗಿಹೋಗಿಬಿಟ್ಟಿತು. ಇದೇ ಕಾರಣಕ್ಕೆ ವೀರಪ್ಪನ್ ಶರಣಾಗುತ್ತೇನೆ ಎಂದು ತನ್ನಬಳಿ ಕರೆಸಿಕೊಂಡು ಎರಕೆಯಂ ಪ್ರದೇಶಕ್ಕೆ ಕರೆಸಿಕೊಂಡು 1991ರ ನವೆಂಬರ್ 10 ರಂದು ಹತ್ಯೆ ಮಾಡಲಾಯಿತು.ಇದಕ್ಕೂ ಮೊದಲು ಗ್ರಾಮಸ್ಥರಿಗೂ ವೀರಪ್ಪನ್ ಬಳಿಗೆ ತೆರಳುವುದಾಗಿ ಹೇಳಿಕೊಂಡಿದ್ದರು, ಎಷ್ಟೇ ತಡೆದರೂ ಕರ್ತವ್ಯ ದೃಷ್ಠಿಯಿಂದ ಬಂಧಿಸುವಲ್ಲಿ ಏಕಾಂಗಿಯೇ ತೆರಳಿದ್ದರು, ವೀರಪ್ಪನ್ ಕೂಡ ಶ್ರೀನಿವಾಸನ್ ಅವರನ್ನು ಏಕಾಂಗಿಯಾಗಿ ಶಸ್ತ್ರಾಸ್ತ್ರಗಳಿರದೆ ಭೇಟಿ ಮಾಡುವ ಶರತ್ತನ್ನು ಇಟ್ಟು ಶರಣಾಗುವ ನಾಟಕವಾಡಿದ್ದ. ಅತ್ಯಂತ ಕ್ರೂರ ಹಾಗು ಬರ್ಬರ ರೀತಿಯಲ್ಲಿ ರುಂಡ ಮುಂಡ ಬೇರ್ಪಡಿಸುವಂತೆ ಕೊಚ್ಚಿ ಪಿ. ಶ್ರೀನಿವಾನ್ ಅವರ ಹತ್ಯೆ ಮಾಡಿ ಬಿಟ್ಟಿದ್ದ ದಂತ ಛೋರ ನಂತರದ ದಿನಗಳಲ್ಲಿ ಅವರೊಂದಿಗೆ ಹಲವು ಪೊಲೀಸರ ಹತ್ಯೆಗೂ ಕಾರಣನಾಗಿದ್ದ ಮೀಸೆಕಾರ ಕಾಡುಗಳ್ಳ ವೀರಪ್ಪನ್…!



ಕೇವಲ ವೀರಪ್ಪನ್ ಮಾತ್ರವಲ್ಲ ನಂತರದ ಅವನ lite version ನಂತಿದ್ದವನಿಂದ ಮಿನಿ ವೀರಪ್ಪನ್ ನಿಂದ ಕೂಡ ದೇಶದೆಲ್ಲಡೆ ಹತರಾದ ಸದಾ ಕಾಡಿನ ಕಣ್ಗಾವಲು ಆಗಿದ್ದ ಅರಣ್ಯ ಸಿಬ್ಬಂಧಿಗಳಿದ್ದಾರೆ… ಕರ್ತವ್ಯ ನಿರತ ಅರಣ್ಯ ರಕ್ಷಕರು,ಫಾರೆಸ್ಟರ್,ರೇಂಜರ್,ಏಸಿಎಫ್,ಡಿಸಿಎಫ್ ಗಳೂ ದೇಶದ ವಿವಿಧೆಡೆ ವನ್ಯಜೀವಿಯಿಂದ ಮೃತಪಟ್ಟಿದ್ದೂ ಇದೇ ಕಾರಣಕ್ಕೆ ಸೆಪ್ಟೆಂಬರ್ 11ರಂದು ರಾಷ್ಟ್ರೀಯ ಅರಣ್ಯ ಸಿಬ್ಬಂಧಿಗಳ ಹುತಾತ್ಮ ದಿನಾಚರಣೆ ಆಚರಿಸಲ್ಪಡುತ್ತದೆ. ಅಮೂಲ್ಯ ಕಾಡು ಸಂಪತ್ತು ಕಾಪಾಡುವ ಸಂದರ್ಭ ಪ್ರಾಣ ತೆತ್ತ ಎಲ್ಲಾ ಅರಣ್ಯ ಸಿಬ್ಬಂಧಿಗಳಿಗೆ ನನ್ನ ಹಾಗು ಸುದ್ದಿಸಂತೆ ತಂಡದ ಶ್ರದ್ದಾಂಜಲಿ.