ಅರಣ್ಯ, ಜಲ ಸಂರಕ್ಷಣೆಗೆ ಒತ್ತು ನೀಡಲು ಜಿಲ್ಲಾಧಿಕಾರಿ ಡಾ ಸತೀಶ್ ಕರೆ

ಶಿಕ್ಷಕರು ಶಾಲೆಗಳಲ್ಲಿ ಮಕ್ಕಳಿಗೆ ಅರಣ್ಯ ಹಾಗೂ ಜಲ ಸಂರಕ್ಷಣೆಯೊಂದಿಗೆ ಪ್ರಾಣಿ- ಪಕ್ಷಿಗಳ ಸಂಕುಲ ಸೇರಿದಂತೆ ಜೀವಿ ವೈವಿಧ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ ಬಿ.ಸಿ.ಸತೀಶ್ ಅವರು ಕರೆ ನೀಡಿದ್ದಾರೆ.
ಕೊಡಗು ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ಅರಣ್ಯ ದಿನ ಹಾಗೂ ವಿಶ್ವ ಜಲ ದಿನಾಚರಣೆ: 2022 ರ ಸಂದರ್ಭದಲ್ಲಿ ಪರಿಸರ ಮಾಹಿತಿಯ ಭಿತ್ತಿಪತ್ರ ಬಿಡುಗಡೆಗೊಳಿಸಿ ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಪ್ರತಿಯೊಬ್ಬರೂ ನೆಲ-ಜಲ, ಅರಣ್ಯ, ಪರಿಸರ, ವನ್ಯಜೀವಿಗಳು ಸೇರಿದಂತೆ ಜೀವ ವೈವಿಧ್ಯವನ್ನು ಸಂರಕ್ಷಣೆ ಮಾಡುವುದರೊಂದಿಗೆ ನಮ್ಮ ಸುತ್ತಲಿನ ಪರಿಸರದಲ್ಲಿ ಮರ-ಗಿಡಗಳ ಸಂರಕ್ಷಣೆಯೊಂದಿಗೆ ಜಲ ಸಂರಕ್ಷಣೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳು,ಮುಖ್ಯೋಪಾಧ್ಯಾಯರಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಣ್ಮರೆಯಾಗುತ್ತಿರುವ ಗುಬ್ಬಚ್ಚಿ ಸೇರಿದಂತೆ ಪಕ್ಷಿ ಸಂಕುಲ ಸಂರಕ್ಷಿಸಲು ಶಿಕ್ಷಕರು ಮಕ್ಕಳಿಗೆ ಅರಿವು ಮೂಡಿಸುವುದರೊಂದಿಗೆ ಅವರಿಗೆ ತಿಳುವಳಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ನಮ್ಮ ಸುತ್ತಲಿನ ಪರಿಸರದಲ್ಲಿ ಬೇಸಿಗೆ ಅವಧಿಯಲ್ಲಿ ಪಕ್ಷಿಗಳಿಗೆ ನೀರು ಮತ್ತು ಕಾಳುಗಳನ್ನು ನೀಡುವ ಮೂಲಕ ಅವುಗಳ ಸಂತತಿಯನ್ನು ವೃದ್ಧಿಸಬೇಕು. ಮನೆಯಂಗಳ, ಮೇಲ್ಛಾವಣಿ ಮತ್ತು ತಾರಸಿ ಮನೆಗಳ ಮೇಲೆ ಪಕ್ಷಿಗಳಿಗೆ ಪೂರಕವಾದ ವಾತಾವರಣ ಕಲ್ಪಿಸುವ ಮೂಲಕ ಅವುಗಳನ್ನು ರಕ್ಷಿಸಬೇಕಿದೆ ಎಂದರು.
ಮಕ್ಕಳಿಗೆ ಪಕ್ಷಿ ಸಂಕುಲ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ದಿಸೆಯಲ್ಲಿ ಕೃತಕ ಗೂಡುಗಳನ್ನು ಒದಗಿಸುವ ಮೂಲಕ ಮಕ್ಕಳಲ್ಲಿ ಪರಿಸರ ಹಾಗೂ ಜೀವಿ ಸಂಕುಲಗಳ ಸಂರಕ್ಷಣೆಗೆ ಶಿಕ್ಷಕರು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಸತೀಶ್ ತಿಳಿಸಿದರು.