ಅರಣ್ಯ ಉತ್ಪನ್ನಗಳ ಮಾರಾಟಕ್ಕೆ ಧಕ್ಕೆ: ಆದಿವಾಸಿಗಳ ಗೋಳು ಕೇಳುವವರು ಯಾರು..?!

ಸುದ್ದಿ ಸಂತೆ ವಿಶೇಷ ವರದಿ

ಬುಡಕಟ್ಟು ಜನಾಂಗದವರಿಗೆ ಜೀವನ ನಡೆಸಲು ಅರಣ್ಯ ಉತ್ಪನ್ನಗಳೇ ಮೂಲ ಆಸರೆ, ಇದೀಗ ತಮ್ಮ ಬಳಿ ಸಂಗ್ರಹಿಸಿದ ಉತ್ಪನ್ನಗಳಿದ್ದು, ಮಾರಾಟ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊವಿಡ್ ಲಾಕ್ಡೌನ್ ನಿಂದ ಅರಣ್ಯದಲ್ಲಿ ಸಿಗುವ ಕಿರು ಉತ್ಪನ್ನಗಳನ್ನು ಸಂಗ್ರಹಿಸಿದ್ದ ಗಿರಿಜನ ವಿವಿಧುದ್ದೇಶ ಸಹಕಾರ ಸಂಘಕ್ಕೆ ತಲುಪಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ.

ಹೆಚ್ಚಾಗಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ಭಾಗದ ಸುಮಾರು 87 ಹಾಡಿಗಳಲ್ಲಿ ಗಿರಿಜನರು ಅರಣ್ಯದಲ್ಲಿ ಸಿಗುವ ತೇಗ, ಹೊನ್ನೆ, ಬೀಟೆಯ ತೊಗಟೆ ಮೇಲೆ ಬೆಳೆಯುವ ಪಾಚಿ(ಪಾಸೆ)ಗೆ ಹೆಚ್ಚಿನ ಬೇಡಿಕೆಯಿದೆ.

ಅತಿ ಬೇಡಿಕೆ ಇರುವ ಮರದ ಪಾಸೆ(ಪಾಚಿ)

ವಿದೇಶದಲ್ಲಿ ಆಹಾರ ಕೈಗಾರಿಕೋಧ್ಯಮಕ್ಕೆ ಬಳಕೆಯಾಗುವ ಇವುಗಳಿಗೆ ಬೆಲೆ ಕೆಜಿಗೆ 300 ರುಪಾಯಿನಷ್ಟಿದೆ. ಇವುಗಳನ್ನೆಲ್ಲಾ ಸಂಗ್ರಹಿಸಿದ್ದರೂ ಮಾರಾಟ ಮಾಡಲಾಗದೆ ಇವರುಗಳು ಕಂಗಿಲಾಗಿದ್ದಾರೆ. ದೇವರಪುರ,ತಿತಿಮತಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಸಿಗುವ ಈ ಉತ್ಪನ್ನಗಳು ದಿನಕ್ಕೆ ನಾಲ್ಕೈದು ಕೆಜಿ ಸಂಗ್ರಹಿಸಿದ್ದಾರೆ. ಇನ್ನು ಅಂಟುವಳಕಾಯಿ, ಕಾಡು ನೆಲ್ಲಿ ಸಹ ಇವರ ಬಳಿ ಇದೆ. ಕಾಡಿನ ಜೇನಿಗೆ ಕೆ.ಜಿಗೆ 600 ರೂಪಾಯಿಯಂತೆ ಸಂಘದಲ್ಲಿ ಖರೀದಿಸಲಾಗುತ್ತಿದ್ದು , ರಾಶಿಗಟ್ಟಲೆ ಸೀಗೆ ಸಾಗಾಟ ಮಾಡುವುದಕ್ಕೂ ಕಷ್ಟವಾಗಿದೆ.

ಗೋದಾಮಿನಲ್ಲಿ ಹಾಳಾಗುತ್ತಿರುವ ಸೀಗೆ ಕಾಯಿ

ಇದರ ಪರಿಣಾಮ ಈ ಭಾಗದಲ್ಲಿ ಆಹಾರ ಉತ್ಪನ್ನಗಳನ್ನು ಸಂಗ್ರಹಿಸಿ, ಹೊರ ಮಾರುಕಟ್ಟೆಗೆ ಕಳಿಸಲು ಸಾಧ್ಯವಾಗದೆ ಸಂಘ ಆದಾಯದಲ್ಲಿ ಹಿನ್ನಡೆಯುಂಟಾಗಿದೆ. ಕೊರೊನಾ ಲಾಕ್ಡೌನ್ ನಿಂದ ಗಿರಿಜನ ಸಮುದಾಯ ಕಾಡಿನಿಂದ ನಾಡಿನತ್ತ ತೆರಳಿದರೆ ಸಾಕು ಕೊರೊನಾ ಅಂಟಿಕೊಳ್ಳುವ ಭೀತಿ ಇರುವುದರಿಂದ ಹಾಡಿವಾಸಿಗಳೇ ಸ್ವಯಂ ಕ್ವಾರಂಟೈನ್ ಆಗಿದ್ದಾರೆ.

ಇತ್ತ ಕಾಫಿ ತೋಟಗಳಲ್ಲಿಯೂ ಕೂಲಿ ಸಿಗುತ್ತಿಲ್ಲ, ಆಗಮ್ಮೆ ಈಗೊಮ್ಮೆ ದಾನಿಗಳೂ, ಸರ್ಕಾರದಿಂದ ದವಸ, ತರಕಾರಿ ಸಿಕ್ಕದರೆ ಆಯ್ತು… ಇಲ್ಲವೇ ಕಾಡಿನ ಗೆಡ್ಡೆಗೆಣಸೇ ಗತಿ. ಒಂದು ಹಿಡಿ ಉಪ್ಪಿಗಾದರೂ ನಾಡಿನತ್ತ ಬರಬೇಕಾದರೂ ನಾಡಿನ ಕಡೆಗೆ ಬರಲೇಬೇಕು. ಹೀಗೆ ಹೋದವ ಕಾಡುಪ್ರಾಣಿಗಳ ಬಾಯಿಗೆ ಸಿಕ್ಕಿಬಿಟ್ಟರೆ, ವಾಪಸ್ಸು ಬರುತ್ತಾನೆಯೇ ಎನ್ನುವ ಗ್ಯಾರಂಟಿಯಿಲ್ಲ…! ಆದ್ದರಿಂದ ಇಲ್ಲಿನ ಜನರದ್ದು ನಿತ್ಯ ಅರಣ್ಯ ರೋಧನೆಯಾಗಿಬಿಟ್ಟಿದೆಯಾದರೂ… ಕಷ್ಟ ಕೇಳೋರ್ಯಾರು… ? ಸಮಾಧಾನ ಹೇಳೋರ್ಯಾರು…? ತೋಚುತ್ತಲೇ ಇಲ್ಲ

error: Content is protected !!