ಅಮೆರಿಕದಿಂದ ಕೊಡಗಿಗೆ ಆಕ್ಸಿಜನ್ ಕನ್ಸಟ್ರೇಟರ್ ಉಪಕರಣಗಳ ಕೊಡುಗೆ

ಕೊಡಗು: ಅಮೇರಿಕಾದ ನ್ಯೂಜೆರ್ಸಿಯಲ್ಲಿ ಮನೋ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದಾಪುರ ಬಳಿಯ ಗುಹ್ಯ ಗ್ರಾಮದ ಡಾ.ಚೊಟ್ಟೇರ ಶೋಭಾ ಟುಟ್ಟು ಹಾಗೂ ಅಮೇರಿಕಾದಲ್ಲಿನ gofundme.org ವತಿಯಿಂದ ಕೊಡಗು ಜಿಲ್ಲಾ ಕೋವಿಡ್ ಆಸ್ಪತ್ರೆಗೆ 5 ಮತ್ತು 10 ಲೀಟರ್ ಸಾಮರ್ಥ್ಯದ 53 “ಆಕ್ಸಿಜನ್ ಕನ್ಸಟ್ರೇಟರ್” ಉಪಕರಣಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

ಅವರೇಮಾದಂಡ ಕೆ.ಮೊಣ್ಣಪ್ಪ (ನಿವೃತ್ತ ಐಎಎಸ್ ಅಧಿಕಾರಿ) ಅವರ ಪ್ರಯತ್ನದಿಂದ ಅಮೇರಿಕಾದಿಂದ ಈ ಉಪಕರಣಗಳನ್ನು ತರಿಸಿಕೊಳ್ಳಲಾಗಿದ್ದು, ಕೊಡಗು ಜಿಲ್ಲೆಯ ಕೋವಿಡ್ ಸೋಂಕಿತರಿಗೆ ಒಳಿತಾಗಲಿ ಎಂಬ ಉದ್ದೇಶದಿಂದ ಡಾ.ಚೊಟ್ಟೇರ ಶೋಭಾ ಟುಟ್ಟು ಅವರು ಈ ಉಪಕರಣಗಳನ್ನು ಕಳುಹಿಸಿದ್ದಾರೆ ಎಂದು ಡಾ.ಸಣ್ಣುವಂಡ ಕಾವೇರಪ್ಪ ತಿಳಿಸಿದ್ದಾರೆ.1984 ರಲ್ಲಿ ದೆಹಲಿಯ ಮೌಲಾನಾ ಅಜಾದ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿಗಳಾಗಿ ವ್ಯಾಸಂಗ ಮಾಡುತ್ತಿದ್ದ ಡಾ.ಶುಭ ವರ್ಮ, ಮೀರಾ ವೆಲ್ಸ್ ಇತರ ಭಾರತೀಯ ವೈದ್ಯರು ಸಹಕಾರ ನೀಡಿದ್ದಾರೆ ಎಂದು ಡಾ.ಸಣ್ಣುವಂಡ ಕಾವೇರಪ್ಪ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಚಾರುಲತ ಸೋಮಲ್ ಸೇರಿದಂತೆ ಅಮೇರಿಕಾದಲ್ಲಿರುವ ವೈದ್ಯರು ವಾಟ್ಸ್ಆಪ್ ಗುಂಪು ಮಾಡಿ, ಹಲವು ಭಾರಿ ಚರ್ಚಿಸಿ ಈ ಉಪಕರಣಗಳನ್ನು ತರಿಸಿಕೊಳ್ಳಲಾಗಿದೆ ಎಂದು ಡಾ.ಕಾವೇರಪ್ಪ ಹೇಳಿದ್ದಾರೆ.