fbpx

“ಟಿಕ್ ಟಾಕ್ ಇನ್ನಿಲ್ಲ” ಚೀನಾದ ಮೇಲೆ ಭಾರತದ ಡಿಜಿಟಲ್ ಸ್ಟ್ರೈಕ್!

ಅಂಕಣ: ಅಭಿವ್ಯಕ್ತಿ

✍️ ರಾಜೇಶ್ ಕಂಬೇಗೌಡ

“ಡಿಜಿಟಲ್ ಸ್ಟ್ರೈಕ್” ಭಾರತದಲ್ಲಿ ಬಳಸುತ್ತಿದ್ದ ಚೀನಾ ಕಂಪನಿಗಳು ಅಭಿವೃದ್ಧಿ ಮಾಡಿದ 59 ಅಪ್ಲಿಕೇಶನ್ಗಳನ್ನ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಇದನ್ನು ಡಿಜಿಟಲ್ ಸ್ಟ್ರೈಕ್ ಎಂದೆ ಕರೆಯಲಾಗುತ್ತಿದೆ. ವಿಪರ್ಯಾಸವೆಂದರೆ ಈ ನಿರ್ಬಂಧದಿಂದ ಚೀನಾಕ್ಕೆ ಎಷ್ಟು ನಷ್ಟವಾಗುತ್ತದೆಯೆಂದು ಅರಿಯದ ನಮ್ಮ ಆಂತರಿಕ ಶತ್ರುಗಳು, ಸಂತೋಷಪಡುವ ಬದಲು ಪ್ರಧಾನಮಂತ್ರಿಯವರನ್ನು ಟೀಕಿಸುತ್ತಿದ್ದಾರೆ. ಈ ಕಂಪನಿಯ ಸಂಸ್ಥಾಪಕನೇ ತಾನು ‘ಈ ಆಪ್ ತಯಾರು ಮಾಡಿದ್ದು ಸೋಂಬೇರಿಗಳಿಗಾಗಿ’ ಎಂದಾಗ ನಮ್ಮಲ್ಲಿನ ಸೋಂಬೇರಿಗಳು ಸ್ವಾಭಿಮಾನವನ್ನು ಬಿಟ್ಟು ಚೀನಾ ಪರವಾಗಿ ನಿಲ್ಲುತ್ತಾರೆ, ಇದೇ ನೋಡಿ ನಮ್ಮ ಸೋಂಬೇರಿಗಳಿಗು ಚೀನೀಯರಿಗೂ ಇರುವ ವ್ಯತ್ಯಾಸ.

ಕೇಂದ್ರ ಸರ್ಕಾರವು ಹೊರಡಿಸಿರುವ ಅಧಿಸೂಚನೆಯಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಆಪ್ ಎಂದರೆ “ಟಿಕ್ ಟಾಕ್”

ಜಗತ್ತಿನಲ್ಲಿ ಸುಮಾರು ಎಂಬತ್ತು ಕೋಟಿಯಷ್ಟು “ಟಿಕ್ ಟಾಕ್”ಬಳಕೆದಾರರಿದ್ದಾರೆ, ಈ ಎಂಬತ್ತು ಕೋಟಿಯಲ್ಲಿ ಭಾರತದ ಪಾಲು ಸುಮಾರು ಹನ್ನೆರಡು ಕೋಟಿ, ಅಂದರೆ ಶೇ. 15%. ಒಂದು ಸರ್ವೆಯ ಪ್ರಕಾರ 2018ರಲ್ಲಿ ಭಾರತ ಒಂದರಿಂದಲೇ ಪ್ರತಿ ನಿತ್ಯ ಸುಮಾರು ಐದು ಕೋಟಿ ಯಷ್ಟು ಸಂಪಾದನೆಯನ್ನು ಈ ಕಂಪೆನಿಯು ಮಾಡುತ್ತಿತ್ತು. ಒಂದು ದಿವಸಕ್ಕೆ ಐದು ಕೋಟಿಯೆಂದರೆ, ಒಂದು ತಿಂಗಳಿಗೆ ನೂರಾ ಐವತ್ತು ಕೋಟಿ, ಒಂದು ವರ್ಷಕ್ಕೆ ಸುಮಾರು “ಒಂದು ಸಾವಿರದ ಎಂಟು ನೂರು ಕೋಟಿ”. ಈಗ 2020 ಅಂದರೆ ಎರಡು ವರ್ಷದ ನಂತರ ಅದೆಷ್ಟು ಕೋಟಿ ಸಂಪಾದನೆ ಮಾಡುತ್ತಿದೆಯೋ ಆ ದೇವರೇ ಬಲ್ಲ. ಗಮನಿಸಿ ಭಾರತ ಚೀನಾದ ಮಟ್ಟಿಗೆ ಅದೆಷ್ಟು ದೊಡ್ಡ ಮಾರುಕಟ್ಟೆ ಎನ್ನುವುದರ ಅರಿವು ಇದರಿಂದ ನಮ್ಮದಾಗುತ್ತದೆ.

ತಜ್ಞರ ಪ್ರಕಾರ “ಟಿಕ್ ಟಾಕ್” ಕಂಪೆನಿಯ ಮೌಲ್ಯ ಸುಮಾರು “ಮೂರು” ಬಿಲಿಯನ್ ಅಮೆರಿಕನ್ ಡಾಲರ್, ಅಂದರೆ ಸುಮಾರು 21,೦೦೦ ಸಾವಿರ ಕೋಟಿ. ಕೇವಲ ಐದು ವರ್ಷಗಳಲ್ಲಿ ಈ ಕಂಪೆನಿಯು ಇಷ್ಟೊಂದು ದೊಡ್ಡ ಮೊತ್ತದ ವ್ಯಾವಹಾರಿಕ ಮೌಲ್ಯ ಸಾಧಿಸಲು ಕಾರಣ ಇದರ ಬಳಕೆದಾರರು, ಅಂದರೆ ಭಾರತದಲ್ಲಿನ ಬಳಕೆದಾರರಿಂದಲೂ ಸಹ ಇದರ ಮೌಲ್ಯ ಹೆಚ್ಚಿದೆ.

ಬಳಕೆದಾರು ಹೆಚ್ಚಾದಂತೆಲ್ಲ ಕಂಪೆನಿಯ ಆದಾಯವೂ ಹೆಚ್ಚುತ್ತದೆ. ನಮ್ಮ ಭಾರತೀಯ ಬಳಕೆದಾರರಿಂದ ದುಡಿದ ಆದಾಯದಿಂದ “ಟಿಕ್ ಟಾಕ್” ಕಂಪೆನಿಯು ಚೀನಾ ಸರ್ಕಾರಕ್ಕೆ ತೆರಿಗೆಯನ್ನು ಕಟ್ಟುತ್ತದೆ, ಇದೇ ತೆರಿಗೆ ಹಣದಿಂದ ಚೀನಾ ದೇಶವು ನಮ್ಮ ಸೈನಿಕರ ಮೇಲೆ ಹಲ್ಲೆ ನಡೆಸಲು ಬೇಕಾದಂತಹ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತದೆ. ಇದೇ ರೀತಿಯ ಕಂಪನಿಗಳು ಚೀನಾ ಸರ್ಕಾರಕ್ಕೆ ನೂರಾರು ಕೋಟಿಯ ದೇಣಿಗೆಯನ್ನೂ ನೀಡುತ್ತವೆ, ನಮ್ಮವರನ್ನೇ ಬಳಸಿಕೊಂಡು ಹಣ ಮಾಡಿ ನಮ್ಮ ಮೇಲೆಯೇ ಕಾಲು ಕೆದರಿಕೊಂಡು ಯುದ್ಧಕ್ಕೆ ಬಂದರೆ ಸುಮ್ಮನಿರಲಾದೀತೇ? ಈಗ ಚೀನಾ ಆಪ್ ಗಳನ್ನ ಬ್ಯಾನ್ ಮಾಡಿರುವುದರಿಂದ ಇಂತಹ ಆದಾಯದಿಂದ ಅಲ್ಲಿನ ಉದ್ಯಮಿಗಳು ವಂಚಿತರಾಗುತ್ತಾರೆ. ಇದು ಸಾಮಾನ್ಯನ ಕಣ್ಣಿಗೆ ಸ್ಪಷ್ಟವಾಗಿ ಕಾಣದ ಆದರೆ ಚೀನಾಗೆ ಸರಿಯಾದ ಪೆಟ್ಟು ಕೊಟ್ಟ ವಿಷಯವಾಗಿದೆ .

ಇನ್ನು ದೇಶದ ಭದ್ರತೆಯ ವಿಚಾರಕ್ಕೆ ಬರುವುದಾದರೆ ಪ್ರತಿಯೊಬ್ಬ “ಟಿಕ್ ಟಾಕ್” ಆಪ್ ಬಳಸುತ್ತಿದ್ದವನು ತನ್ನ ಇಡೀ ವೈಯಕ್ತಿಕ ಮಾಹಿತಿಯನ್ನು ಕಂಪನಿಗೆ ನೀಡಿರುತ್ತಾನೆ. ತನ್ನ ಹೆಸರು, ವಿಳಾಸ, ವಯಸ್ಸು, ಲಿಂಗ ಇತ್ಯಾದಿ ಇತ್ಯಾದಿ. ಇದೆಲ್ಲವನ್ನೂ ನೀಡಿದ ಮೇಲೆ ಕೊನೆಯಲ್ಲಿ ‘ನಿಯಮಗಳು ಹಾಗು ಷರತ್ತುಗಳು’ ಕಂಡು ಬರುತ್ತದೆ, ಎಷ್ಟು ಜನರು ಈ ನಿಯಮಗಳನ್ನು ಓದುತ್ತಾರೆ? ಅದರೊಳಗೆ ಏನಿದೆಯೆಂದು ಯಾರಿಗಾದರೂ ತಿಳಿದಿದೆಯೇ? ಬಳಕೆದಾರರು ನೀಡುವ ಮಾಹಿತಿಯನ್ನು ನೂರಾರು ಕೋಟಿ ರೂಪಾಯಿಗಳಿಗೆ ಮಾರಿಕೊಳ್ಳಲಾಗುತ್ತದೆ‌.

ಕೇಂದ್ರ ಸರ್ಕಾರವು ನಿಷೇಧಿಸಿರುವ ಒಂದೇ ಒಂದು “ಆಪ್” ನಿಂದ ಸಾವಿರಾರು ಕೋಟಿಯಷ್ಟು ಹಣವು ಚೀನಾದ ಪಾಲಾಗುತ್ತಿತ್ತೆಂದರೆ, ಉಳಿದ 58 ಆಪ್ ಗಳಿಂದ ಇನ್ನೆಷ್ಟು ಸಾವಿರಾರು ಕೋಟಿಯಷ್ಟು ಆದಾಯವನ್ನು ಚೀನಾ ದೇಶವು ಭಾರತದಿಂದ ಪಡೆಯುತ್ತಿತ್ತೆಂದು ನೀವೇ ಯೋಚಿಸಿ ನೋಡಿ. ಇನ್ನು ಪರೋಕ್ಷವಾಗಿ ನಮ್ಮಲ್ಲಿನ ಮಾಹಿತಿಯನ್ನು ಪಡೆದುಕೊಂಡು, ಆಂತರಿಕ ಜಗಳಗಳನ್ನು ಸೃಷ್ಟಿಸಲು ಕಾರಣವಾದ “ಟಿಕ್ ಟಾಕ್” ಆಪ್ ನಿಷೇಧದಿಂದಾಗಿ ನಮಗೇನು ನಷ್ಟವಿಲ್ಲ . ಈಗಾಗಲೇ ಚೀನಾ ಸರ್ಕಾರದ ಕೆಲವು ಅಧಿಕಾರಿಗಳು ಭಾರತದ ಮುಂದೆ ಮಂಡಿಯೂರಿ, ನಿಷೇಧವನ್ನು ಹಿಂಪಡೆಯುವಂತೆ ಕೇಳಿಕೊಳ್ಳುತ್ತಿವೆ. ಇದು ಕೇವಲ ಆರ್ಥಿಕ ಯುದ್ಧದ ಆರಂಭವಷ್ಟೇ, “ಆತ್ಮನಿರ್ಭರಭಾರತ್” ಅಭಿಯಾನ ಯಶಸ್ವಿಯಾಗಬೇಕಾದರೆ ಈ ರೀತಿಯ ಆರ್ಥಿಕ ದಾಳಿಯ ಅವಶ್ಯಕತೆ ಇತ್ತು.

ರಾಜೇಶ್ ಕಂಬೇಗೌಡ, ಅಂಕಣಕಾರರು
error: Content is protected !!