ಅನಧಿಕೖತ ಕಟ್ಟಡ ನಿಮಾ೯ಣ – ಮೂಡಾ ವಾರ್ನಿಂಗ್

ಅನುಮತಿ ಪಡೆಯದೇ ಮಡಿಕೇರಿ ನಗರದ ವಿವಿಧ ಕಡೆಗಳಲ್ಲಿ ಅನಧಿಕೃತ ಕಟ್ಟಡ ಕಟ್ಟುತ್ತಿರುವುದು ಕಂಡು ಬರುತ್ತಿದ್ದು, ಇದರ ವಿರುದ್ದ ಶಿಸ್ತು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ಎಚ್ಚರಿಕೆ ನೀಡಿದ್ದಾರೆ.

ಅನಧಿಕೃತ ಕಟ್ಟಡಗಳ ನಿಮಾ೯ಣದ ಕುರಿತು ಮೂಡಾಕ್ಕೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಮೂಡಾ ಪ್ರಾಧಿಕಾರ ಮತ್ತು ಮಡಿಕೇರಿ ನಗರ ಸಭೆ ಪೌರಾಯುಕ್ತರು ಮತ್ತು ಬಿಜೆಪಿ ಸದಸ್ಯರು ವಿವಿಧ ಕಡೆ ನಿಮಾ೯ಣವಾಗುತ್ತಿರುವ ಕಟ್ಟಡಗಳಿಗೆ ತೆರಳಿ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭ ಹಲವು ಕಟ್ಟಡಗಳಿಗೆ ಮೂಡಾ ಮತ್ತು ಮಡಿಕೇರಿ ನಗರಸಭೆಯ ಅನುಮತಿಯನ್ನೇ ಪಡೆಯದಿರುವುದು ಕಂಡು ಬಂದಿದೆ. ಈ ಕಾರಣದಿಂದ ಕೆಲವು ಕಟ್ಟಡ ಮಾಲೀಕರಿಗೆ ನೋಟೀಸ್ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಮಡಿಕೇರಿ ವ್ಯಾಪ್ತಿಯ ಇತರ ನಿಮಾ೯ಣ ಹಂತದಲ್ಲಿರುವ ಕಟ್ಟಡಗಳ ದಾಖಲಾತಿಯನ್ನೂ ಪರಿಶೀಲನೆ ನಡೆಸಲಾಗುತ್ತದೆ ಎಂದು ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ಹೇಳಿದ್ದಾರೆ.

ಮಡಿಕೇರಿ ನಗರದ ಕಾವೇರಿ ಮಹಲ್ ಚಿತ್ರ ಮಂದಿರವನ್ನು ಮೂಡಾ ಮತ್ತು ನಗರಸಭೆಯ ಗಮನಕ್ಕೆ ತಾರದೇ ನವೀಕರಣ ಮಾಡಲಾಗುತ್ತಿದೆ. ಆದರೆ ಆ ಕಟ್ಟಡ ತೀರಾ ಹಳೆಯದಾಗಿದ್ದು, ಅದರ ನವೀಕರಣ ಮಾಡಲು ಅನುಮತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಆ ಕಟ್ಟಡದ ಮಾಲೀಕರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಮೇಶ್ ಹೊಳ್ಳ ಮಾಹಿತಿ ನೀಡಿದ್ದಾರೆ.

ನೀಲಿ ನಕ್ಷೆಯ ಪ್ರಕಾರವೇ ಕಟ್ಟಡಗಳ ನಿಮಾ೯ಣವಾಗಬೇಕು. ಪರಿಶೀಲನೆಯ ಸಂದರ್ಭ ಕಾನೂನು, ಅನುಮತಿ ಉಲ್ಲಂಘನೆ, ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಡಾ ಅಧ್ಯಕ್ಷ ರಮೇಶ್ ಹೊಳ್ಳ ಎಚ್ಚರಿಸಿದ್ದಾರೆ.

ಮಡಿಕೇರಿ ನಗರದಲ್ಲಿ ಕಟ್ಟಡ ನಿಮಿ೯ಸಲು ಮುಂದಾಗುವವರು ಮೂಡಾ ಮತ್ತು ಮಡಿಕೇರಿ ನಗರ ಸಭೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯುವಂತೆ ರಮೇಶ್ ಹೊಳ್ಳ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

error: Content is protected !!