ಅಜಾತ ಶತ್ರು ಜನ್ಮದಿನ; ಭಾರತದದ್ಯಾಂತ “ಉತ್ತಮ ಆಡಳಿತ ದಿವಸ” ಸಂಭ್ರಮ!

ಡಿಸೆಂಬರ್ ೨೫ ಕ್ರಿಸ್ಮಸ್ ದಿನಾಚರಣೆ -ಯೇಸುವಿನ ಜನ್ಮ ದಿನ-ವಿಶ್ವ ದಾದ್ಯಂತ ಆಚರಣೆ ಮಾಡುವ ಸಾಮೂಹಿಕ ಹಬ್ಬವಾಗಿದೆ.
ಭಾರತಿಯ ಜನತಾ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಪೂರ್ವ ಪ್ರಧಾನಿ ಬ್ರಹ್ಮಚಾರಿ ಅಟಲ್ ಬಿಹಾರಿ ವಾಜಪೇಯೀ ಅವರ ಜನ್ಮ ದಿನವೂ ಹೌದು. ನಿಸ್ವಾರ್ಥಿ, ಅಭಿವ್ರದ್ಧಿಯೇ ನನ್ನ ಗುರಿ ಎಂದು ಪ್ರಪಂಚಕ್ಕೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿ. ಭಾರತದ ನವ ನಿರ್ಮಾಣಕ್ಕೆ ನಾಂದಿ ಹಾಡಿದ್ದಾರೆ. ಇವರಲ್ಲಿ ಕುಟುಂಬ ರಾಜಕೀಯವಿಲ್ಲ. ಇತ್ತೀಚೆಗಿನ ರಾಜಕೀಯ ಗಮನಿಸಿದಾಗ ಕುಟುಂಬಕ್ಕೆ ಹೆಚ್ಚು ಹೆಚ್ಚು ಪ್ರಾತಿನಿಧ್ಯ ಕೊಟ್ಟು ಅಭಿವ್ರದ್ಧಿ ನಿರ್ಲಕ್ಷ ಮಾಡುವ ಮುಖಂಡರ ಸಂಖ್ಯೆ ಏರುತ್ತಾ ಇದೆ…ಇದು ವಿಷಾದನೀಯ ಬೆಳವಣಿಗೆಯಾಗಿದೆ

ಭಾರತ ದೇಶ ಕಂಡ ಧೀಮಂತ ನಾಯಕ,ಅಜಾತ ಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಡಿಸೆಂಬರ್ 25 ಈ ದಿನವನ್ನು “ಉತ್ತಮ ಆಡಳಿತ ದಿವಸ” “Good Governance Day” ಎಂದು ಭಾರತಾದ್ಯಂತ 2014 ರಿಂದ ಆಚರಿಸಲಾಗುತ್ತಿದೆ.
ವಿಶ್ವದ ಅತ್ಯುತ್ತಮ ನಾಯಕರ ಸಾಲಿನಲ್ಲಿ ಗೌರವಿಸಲ್ಪಡುವ ಸನ್ಮಾನ್ಯ ಅಟಲ್ ಬಿಹಾರಿ ವಾಜಪೇಯಿ ಸಕ್ರಿಯಾ ರಾಜಕಾರಣಿ, ಕವಿ, ಹೆಸರಾಂತ ಪತ್ರಕರ್ತ, ಶ್ರೇಷ್ಠ ವಾಗ್ಮಿ, ಚಿಂತಕ, ದಾರ್ಶನಿಕ, ನಿಸ್ವಾರ್ಥ ರಾಜಕಾರಣಿ, ನುಡಿದಂತೆ ನಡೆಯುವ ಮಾನವತಾವಾದಿಯ ಜನ್ಮ ದಿನದ ಈ ಶುಭ ಸಂದರ್ಭದಲ್ಲಿ ಅವರ ಹೆಜ್ಜೆ ಗುರುತನ್ನು ದಾಖಲಿಸುವ ವಿಶೇಷ ಲೇಖನ…
ವಿರೋಧ ಪಕ್ಷದ ನಾಯಕ ನಾಗಿ ದೇಶದ ಯುವ ನಾಯಕರಿಗೆ ಮಾರ್ಗದರ್ಶನ ಕೊಟ್ಟು ಮತ್ತೆ ಭವ್ಯ ಭಾರತದ ಪ್ರಧಾನಿ ಪಟ್ಟವನ್ನು ಅಲಂಕರಿಸಿ ವಿಶ್ವದ ನಾಯಕರಿಗೆಲ್ಲಾ ಮಾದರಿಯಾಗಿ ದೇಶದ ಕೀರ್ತಿ ಪತಾಕೆಯನ್ನು ಅತಿ ಎತ್ತರದಲ್ಲಿ ಹಾರಿಸಿದ್ದಾರೆ.
ನಿಸ್ವಾರ್ಥ ಜೀವನ ನಡೆಸಿದ ಮುಖಂಡನಿಗೆ ಜನ್ಮ ದಿನದ ಶುಭಾಶಯಗಳು. ಸನ್ಮಾನ್ಯ ವಾಜಪೇಯಿಯವರು 1924 ಡಿಸೆಂಬರ್ 25 ರಂದು ಮಧ್ಯಪ್ರದೇಶದ ಗ್ವಾಲಿಯರ್ ಹತ್ತಿರದ ‘ಶಿಂದೆ ಕಿ ಚವ್ವಾಣಿ’ ಗ್ರಾಮದಲ್ಲಿ ಶ್ರೀ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಶ್ರೀಮತಿ ಕೃಷ್ಣದೇವಿ ದಂಪತಿಗಳ ಮಗನಾಗಿ ಜನಿಸಿದರು. ತಂದೆಯವರು ಶಾಲಾ ಮಾಸ್ತರ್ ಹಾಗೂ ಕವಿಯಾಗಿದ್ದರು. ಪ್ರೌಢ ವಿದ್ಯಾಭ್ಯಾಸದ ನಂತರ ಗ್ವಾಲಿಯರ್‍ನ ವಿಕ್ಟೊರಿಯಾ ಕಾಲೇಜ್ (ಇವಾಗ ಲಕ್ಷ್ಮೀಬಾಯಿ ಕಾಲೇಜು) ನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪದವಿಯನ್ನು ಪಡೆದರು. ಖಾನ್ಪುರ್ ದಯಾನಂದ್ ಅಂಗ್ಲೊ ವೇದಿಕ್ ಕಾಲೇಜಿನಲ್ಲಿ ಎಂ.ಎ. ರಾಜನೀತಿ ಶಾಸ್ತ್ರ ಸ್ನಾತಕೋತರ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಗಳಿಸಿದರು.
1939ರಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸ್ವಯಂ ಸೇವಕನಾಗಿ ಪಡೆದ ಅನುಭವ, ಅಧಿಕಾರಿಗಳ ತರಭೇತಿಯನ್ನು ಪಡೆದು 1940-44ರ ಅವಧಿಯಲ್ಲಿ ಪೂರ್ಣ ಅವಧಿಯ ಕಾರ್ಯಕರ್ತರಾದರು. ನಂತರ ವಿಸ್ತಾರಕ್ (ಪ್ರಾಚಾರಕ) ರಾಗಿ ಬಡ್ತಿ ಪಡೆದರು. ಜೊತೆಯಲ್ಲಿ ದೀನ್ ದಯಾಳ್ ಉಪಾದ್ಯಾಯರವರ ಹಿಂದಿ ಮಾಸಿಕ ‘ಪಾಂಚಜನ್ಯ’ ಹಿಂದಿ ವಾರಪತ್ರಿಕೆ ‘ಸ್ವದೇಶ್’ ವೀರ ಅರ್ಜುನ್ ದಿನಪತ್ರಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಡರು.
1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಮೂಲಕ ಗುರುತಿಸಿಕೊಂಡ ವಾಜಪೇಯಿಯವರು 1951ರಲ್ಲಿ ಜನಸಂಘ ಹಿಂದೂ ಬಲ ಪಂಕ್ತಿಯ ರಾಜಕೀಯ ಪಕ್ಷದಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.
1957ರಲ್ಲಿ ಬಲರಾಂಪುರದಿಂದ ಲೋಕಸಭೆಗೆ ಆಯ್ಕೆಯಾದ ವಾಜಪೇಯಿಯವರ ವಾಕ್ಚಾತುರ್ಯದ ಮೂಲಕ ಅಂದಿನ ಪ್ರಧಾನಿ ಜವಹರ್ ಲಾಲ್ ನೆಹರು ರವರಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ದೀನದಯಾಳ್ ಉಪಾದ್ಯಾಯರವರ ನಿಧನದ ನಂತರ ಜನಸಂಘದ ನಾಯಕತ್ವ ವಾಜಪೇಯಿಯವರ ಜವಬ್ಧಾರಿಗೆ ಬಂದಿತು. 1968ರ ಸಮಯದಲ್ಲಿ ಎಲ್. ಕೆ. ಅದ್ವಾನಿಯವರು ಇವರ ಜೊತೆಗೂಡಿದರು.
1975-77 ರ ಅವಧಿಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸ ಅನಿಭವಿಸಿದರು. 1977ರಲ್ಲಿ ಜಯಪ್ರಕಾಶ್ ನಾರಾಯಣರವರ ಮಾರ್ಗದರ್ಶನದಲ್ಲಿ ಜನಸಂಘ ಮತ್ತು ಇನ್ನಿತರ ಪಕ್ಷಗಳನ್ನು ವಿಲೀನವಾಗಿ “ಜನತಾ ಪಕ್ಷ” ಉದಯವಾಯಿತು. ಲೋಕಸಭಾ ಚುನಾವಣೆಯಲ್ಲಿ ಜಯಭೇರಿಗಳಿಸಿದ “ಜನತಾಪಕ್ಷ” ಅಧಿಕಾರಕ್ಕೆ ಬಂದು ಶ್ರೀ ಮೋರಾರ್ಜಿ ದೇಸಾಯಿ ಪ್ರಧಾನ ಮಂತ್ರಿಯಾದರು. ಮಾನ್ಯ ವಾಜಪೇಯಿಯವರು ವಿದೇಶಾಂಗ ಸಚಿವರಾದರು. ಯು.ಎನ್.ಒ. ದಲ್ಲಿ ಪ್ರಥಮಬಾರಿಗೆ ಹಿಂದಿಯಲ್ಲಿ ಭಾಷಣ ಮಾಡಿದ ನಂತರ ಭಾರತದ ವಿದೇಶಾಂಗ ನೀತಿಯಲ್ಲಿ ಹೆಚ್ಚಿನ ಬಲ ಪಡೆದು ಭಾರತದ ಹೆಸರಿಗೆ ಗೌರವ ದೊರೆಯುವಂತಾಯಿತು.
1980ರಲ್ಲಿ ಜನತಾ ಪಕ್ಷ ಭಾರತೀಯ ಜನತಾಪಕ್ಷವಾಗಿ ರೂಪುಗೊಂಡಿತು.ಭಾರತೀಯ ಜನತಾಪಕ್ಷದ ಪ್ರಥಮ ರಾಷ್ಟ್ರೀಯ ಅಧ್ಯಕ್ಷರಾಗಿ ಜವಬ್ಧಾರಿಯನ್ನು ವಹಿಸಿಕೊಂಡರು
1996 ರಲ್ಲಿ ಭಾರತೀಯ ಜನತಾಪಕ್ಷ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಅಧಿಕಾರದ ಗದ್ದುಗೆಯನ್ನು ಏರಿ, ಮಾನ್ಯ ವಾಜಪೇಯಿಯವರು ಭಾರತದ 11ನೇ ಪ್ರಧಾನಮಂತ್ರಿಯಾದರು. ಲೋಕಸಭೆಯಲ್ಲಿ ಬಹುಮತ ಸಾಬಿತುಪಡಿಸುವಲ್ಲಿ ವಿಫಲರಾಗಿ ಕೇವಲ ಹದಿಮೂರು ದಿನದಲ್ಲೇ ರಾಜಿನಾಮೆಯನ್ನು ನೀಡಬೇಕಾಯಿತು.
1998 ರಲ್ಲಿ ನಡೆದ ಸಾರ್ವರ್ತಿಕ ಚುನಾವಣೆಯಲ್ಲಿ ಮತ್ತೊಮ್ಮೆ ಎನ್.ಡಿ.ಎ. ಪಕ್ಷಗಳ ಸಹಕಾರದೊಂದಿಗೆ ದ್ವಿತೀಯ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1999 ರಲ್ಲಿ ಮತ್ತೊಮ್ಮೆ ರಾಜಕೀಯ ಚದುರಂಗದಾಟದಲ್ಲಿ ಎ.ಐ.ಡಿ.ಎಂ.ಕೆ. ತನ್ನ ಬೆಂಬಲ ಹಿಂಪಡೆದ ಪರಿಣಾಮವಾಗಿ ಲೋಕಸಭೆ ವಿಸರ್ಜನೆಯಾಯಿತು.
1999ರಲ್ಲಿ ನಡೆದ ಚುನಾವಣೆಯಲ್ಲಿ ವಾಜಪೇಯಿಯವರು ಮೂರನೆಯ ಬಾರಿಗೆ ಪ್ರಧಾನಮಂತ್ರಿಯಾಗಿ 2004ರ ವರೆಗೆ ಪೂರ್ಣ ಅವಧಿಯ ಆಡಳಿತವನ್ನು ನಡೆಸಿದರು.
ಕಾಂಗ್ರೆಸ್ ಹೊರತುಪಡಿಸಿದ ಪಕ್ಷದಿಂದ ಪ್ರಧಾನಿಯಾಗಿ, ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಪ್ರಥಮ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಶ್ರೇಯಸ್ಸು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ. ಒಂದು ಡಜನ್‌ಗಿಂತಲೂ ಅಧಿಕ ಚಿಕ್ಕ ಪುಟ್ಟ ಪಕ್ಷಗಳೊಂದಿಗೆ ಮೈತ್ರಿ ಸರಕಾರವನ್ನು ಮುನ್ನಡೆಸಿದ್ದು ಅವರ ಮತ್ತೊಂದು ಹೆಗ್ಗಳಿಕೆ
ಭಾರತ ದೇಶದ ಅಭಿವೃದ್ಧಿಗೆ ವಾಜಪೇಯಿಯವರ ಕೊಡುಗೆ…
1998 ಮೇ ತಿಂಗಳಿನಲ್ಲಿ ರಾಜಸ್ಥಾನ್ – ಪೊಕ್ರಾನ್ ನಲ್ಲಿ ಭೂಮಿಯ ಅಡಿಯಲ್ಲಿ ನಡೆಸಿದ ಅಣ್ವಸ್ತ್ರ ಪರೀಕ್ಷೆ ಪೋಕ್ರಾನ್- 1, ಪೋಕ್ರಾನ್-2 ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು, ರಶ್ಯಾ, ಫ್ರಾನ್ಸ್, ಯು.ಎಸ್.ಎ., ಕೆನಡಾ, ಜಪಾನ್, ಬ್ರಿಟನ್, ಯೂರೋಪ್ ರಾಷ್ಟ್ರಗಳು ಬೆಕ್ಕಸ ಬೆರಗಾಗಿ ನೋಡುವಂತೆ ಮಾಡಿತ್ತು.
1999ರಲ್ಲಿ ಅನೀರಿಕ್ಷಿತ ಕಾರ್ಗಿಲ್ ಯುದ್ಧ ಘೋಷಣೆಯಾದಾಗ “ಅಪರೇಶನ್ ವಿಜಯ್” ಮೂಲಕ ಶತ್ರು ಪಡೆಗಳನ್ನು ಹಿಮ್ಮೆಟಿಸಿ, ಆಕ್ರಮಿತ ನೆಲವನ್ನು ಸ್ವಾದೀನ ಪಡಿಸಿಕೊಂಡು ಜಯ ಸಾಧಿಸಿದ್ದು. ಭಾರತೀಯರಲ್ಲಿ ಸೇನೆಯ ಬಗ್ಗೆ ಅಭಿಮಾನ, ಗೌರವ ಹಿಮ್ಮಡಿಯಾಗಿ ಮೂಡಿಸಿ, ದೇಶ ಭಕ್ತಿ ಜಾಗೃತಿ ಗೊಳಿಸಿದ್ದು ವಾಜಪೇಯಿಯವರ ಸಾಧನೆಯನ್ನು ಭಾರತೀಯರು ಎಂದೆಂದಿಗೂ ಮರೆಯಲಾರರು.
1999ರಲ್ಲಿ ಇಂಡಿಯನ್ ಏರ್ ಲೈನ್ಸ್ ವಿಮಾನ ಅಪಹರಿಸಿದ ಸಂದರ್ಭದಲ್ಲಿ, ಬೇಡಿಕೆಗೆ ಒಪ್ಪಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ತಾಯಿನಾಡಿಗೆ ಕರೆತಂದ ಸಾಹಸ ಇವರದ್ದು.
ದೇಶದ ನಾಲ್ಕು ಮೂಲೆಗಳಿಗೂ ಸಂಪರ್ಕ ಕಲ್ಪಿಸುವ 15ಸಾವಿರ ಕಿ.ಮಿ. ಉದ್ದದ “ಸುವರ್ಣ ಚತುಷ್ಪತ” ಹೆದ್ದಾರಿಯನ್ನು ದಾಖಲೆಯ ಸಮಯದಲ್ಲೇ ಪೂರ್ತಿಗೊಳಿಸಿದ ಸಾಧನೆ ವಾಜಪೇಯಿಯವರದ್ದು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಳ್ಳಿ ಹಳ್ಳಿಗೂ ರಸ್ತೆಯನ್ನು ಒದಗಿಸಿದ್ದು ಇನ್ನೊಂದು ಸಾಧನೆ.2001ರಲ್ಲಿ “ಸರ್ವ ಶಿಕ್ಷಣ ಅಭಿಯಾನ” ಪ್ರಾರಂಭಿಸಿ ಪ್ರಾಥಮಿಕ, ಪ್ರೌಢಶಾಲಾ ಮಟ್ಟದ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸುವ ಯೋಜನೆಯನ್ನು ಹಾಕಿ ಕಾರ್ಯರೂಪಕ್ಕೆ ತಂದಿರುವುದು. “ಸರ್ವಶಿಕ್ಷಣ ಅಭಿಯಾನ” ದೇಶದ ಎಲ್ಲಾ ಭಾಗದಲ್ಲಿರುವ ಶಾಲೆಗಳಿಗೆ ಹೋಗಲಾಗದ ಮಕ್ಕಳನ್ನು “ಸರ್ವ ಶಿಕ್ಷಣ ಅಭಿಯಾನ” ಮೂಲಕ ಕಡ್ಡಾಯವಾಗಿ ಶಾಲೆಗೆ ಹೋಗಿ ಕಲಿಯುವ ಮೂಲಕ ಎಲ್ಲರೂ ಸಾಕ್ಷರರನ್ನಾಗಿ ಮಾಡುವ ಯೋಜನೆ ವಾಜಪೇಯಿಯವರು ದೂರದೃಷ್ಠಿ ಹೊಂದಿದ ನಾಯಕರಾಗಿದ್ದಾರೆ.
ಭಾರತೀಯ ಸಾರ್ವಜನಿಕ ಜೀವನದಲ್ಲಿ ಅಜಾತಶತ್ರು ಎಂದೇ ಹೆಸರು ಮಾಡಿದ್ದಾರೆ. ಮಾತುಗಾರಿಕೆಯಲ್ಲಿ ಅವರನ್ನು ಮೀರಿಸುವರಿಲ್ಲ. ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾತನಾಡಿ ಇತಿಹಾಸ ನಿರ್ಮಿಸಿದರು. ಇವರಿಗೆ ಪದ್ಮವಿಭೂಷಣ ಪ್ರಶಸ್ತಿ (1992), 1994ರಲ್ಲಿ ಭಾರತದ ಅತ್ಯುತ್ತಮ ಸಂಸದೀಯ ಪಟು, ಹಾಗೂ 2015ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕಾರ ಲಭಿಸಿವೆ.
ವಾಜಪೇಯಿ ಬಗ್ಗೆ ಎಷ್ಟು ಬರೆದರೂ ಸಾಕೆನಿಸುತ್ತಿಲ್ಲ.ಅವರ ಬಗ್ಗೆ ಸಂಶೋಧಿಸಿದಷ್ಟೂ ಮುಗಿಯುತ್ತಿಲ್ಲ. ಹೊಗಳಿದಷ್ಟೂ ಅಕ್ಷರಗಳು ಸಾಕಾಗುತ್ತಿಲ್ಲ. ಅಕ್ಷರಗಳೇ ಸಿಗುತ್ತಿಲ್ಲ. ಒಂದೇ ವಿಷಯದ ಬಗ್ಗೆ ಮತ್ತೆ ಮತ್ತೆ ಬರೆಯಲು ಬೋರೂ ಆಗುತ್ತಿಲ್ಲ.
ದೇಶಕ್ಕಾಗಿ ತನ್ನಿಡಿ ಜೀವನ ಧಾರೆಯೆರೆದ ಅಜಾತ ಶತ್ರು ಅಟಲ್ ಜೀ ಯುಗಕೊಬ್ಬರು.
2005 ಡಿಸೆಂಬರ್‍ನಲ್ಲಿ ರಾಜಕೀಯಾ ನಿವೃತಿಯನ್ನು ಘೋಷಿಸಿದ ಅಟಲ್ ಬಿಹಾರಿ ವಾಜಪೇಯಿ ತೀವ್ರ ಅನಾರೋಗ್ಯದ ಕಾರಣ ಚಿಕಿತ್ಸೆ ಪಾಲಿಸದೆ 16-08-2018 ರಲ್ಲಿ ವಿಧಿವಶರಾದರು.
