ಅಕ್ರಮ ಚಿಪ್ಪು ಹಂದಿ ಮಾರಾಟ ಯತ್ನ; ಇಬ್ಬರ ಬಂಧನ

ಮಡಿಕೇರಿ ಏ. 6 : ಅತ್ತೂರು ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಮುಂಭಾಗ ಅಕ್ರಮವಾಗಿ ಚಿಪ್ಪು ಹಂದಿಯ ಚಿಪ್ಪುಗಳನ್ನು ಮಾರಾಟಮಾಡಲು ಯತ್ನಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ.

ವಿರಾಜಪೇಟೆಯ ಚೆನ್ನಂಗಿ ಗ್ರಾಮದ ರಾಜು ಹಾಗೂ ಸೋಮವಾರಪೇಟೆ ತಾಲೂಕಿನ ಕಟ್ಟೆಪುರ ಗ್ರಾಮದ ಧರ್ಮ ಎಂಬಾತ ಅತ್ತೂರು ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಮುಂಭಾಗ ಪ್ಲಾಸ್ಟಿಕ್ ಚೀಲದ ಒಳಗೆ ಪೆಂಗೋಲಿನ್ (ಚಿಪ್ಪು ಹಂದಿಯ ಚಿಪ್ಪು) ಚಿಪ್ಪುಗಳನ್ನು ಇಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ವಿರಾಜಪೇಟೆ ತಾಲೂಕು ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪೊನ್ನಂಪೇಟೆ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್.ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಪೊಲೀಸ್ ಮಹಾ ನಿರೀಕ್ಷಕ ಕೆ.ಎ.ಶರತ್ ಚಂದ್ರ ಅವರ ನಿರ್ದೇಶನದ ಮೇರೆಗೆ, ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳದ ಪ್ರಭಾರ ಅರಕ್ಷಕ ಉಪನಿರೀಕ್ಷಕ ಸಿ.ಯು.ಸವಿ, ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ಕೆ.ಎಸ್.ದೇವಯ್ಯ, ಸಿ.ಬಿ.ಬೀನ, ಎಸ್.ಎಂ ಯೋಗೇಶ್ ಪಿ.ಯುಮುನೀರ್ ಆರ್. ನಂದ ಕುಮಾರ್, ಮೋಹನ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!