fbpx

ಅಕ್ಟೋಬರ್ 31ಧೀರ ಅಪ್ಪಯ್ಯಗೌಡರನ್ನು ಗಲ್ಲಿಗೇರಿಸಿದ ದಿನ”ಕೊಡಗು ಜಿಲ್ಲಾ ಹುತಾತ್ಮ ದಿನಾಚರಣೆಯ ದಿನ”

ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯವು ಉಪವಾಸ ಮಾಡಿದ್ದರಿಂದ ಅಥವಾ ಬ್ರಿಟಿಷರು ನೀಡಿದ ಹುದ್ದೆಗಳನ್ನೆ ದೈವವೆಂದು ಭಾವಿಸಿ ಅವರಿಗೆ ಗುಲಾಮತನ ತೋರಿಸಿದಂತವರಿಂದ ಬಂದದ್ದಲ್ಲ, ಅದರ ಹಿಂದೆ ಲೆಕ್ಕವಿಡಲು ಸಾಧ್ಯವಿಲ್ಲದಷ್ಟು ಜನರು ತಮ್ಮ ರಕ್ತಬಸಿದು ಹೋರಾಡಿ ಪ್ರಾಣತ್ಯಾಗ ಮಾಡಿದ್ದಾರೆ. ಅಂತಹದ್ದೊಂದು ಹೋರಾಟವೇ “ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ” ಎಂದು ಕರೆಯಲ್ಪಡುತ್ತದೆ.

ಕೊಡಗು – ಸುಳ್ಯ – ಮಂಗಳೂರು ಹಾಗೂ ಕಾಸರಗೋಡು ಭಾಗದ ರೈತಾಪಿ ಜನರು ಸೇರಿದಂತೆ ಬ್ರಿಟಿಷರ ತೆರಿಗೆ ನೀತಿಯನ್ನು ವಿರೋಧಿಸಿ ಶುರುಮಾಡಿದ ಸಣ್ಣ ಹೋರಾಟ ಕೊನೆಗೆ ಬ್ರಿಟಿಷರು ಇವರನ್ನು ಮಟ್ಟಹಾಕಲು ನೆರವಾದ ನಮ್ಮ ನಾಡಿನ ಕೆಲವು ಕುತಂತ್ರಿಗಳಿಗೆ ಚಿನ್ನ, ಬೆಳ್ಳಿ ಹಾಗು ಕಂಚಿನ ಪದಕಗಳನ್ನು ನೀಡುವಷ್ಟರ ಮಟ್ಟಿಗೆ ಈ ಹೋರಾಟ ನಡೆದಿತ್ತು ಅಂದರೆ ನಾವೆಲ್ಲರು ಅದರ ತೀವ್ರತೆಯನ್ನು ಊಹಿಸಿಕೊಳ್ಳಬೇಕು. ಅಂದು ಬ್ರಿಟಿಷರಿಗೆ ಅಕ್ಷರಶಃ ಸಿಂಹಸ್ವಪ್ನವಾಗಿ ಕಾಡಿದ್ದು ನಮ್ಮ ನಾಡಿನ ಹೆಮ್ಮೆಯ ಧೀರ ರೈತಯೋಧರಾದ ಕೊಡಗಿನ ಬಲಮುರಿಯ ಸುಬೇದಾರ್ ಗುಡ್ಡೇಮನೆ ಅಪ್ಪಯ್ಯ ಗೌಡರು, ಕೆದಂಬಾಡಿಯ ರಾಮಗೌಡರು, ಕಲ್ಯಾಣಸ್ವಾಮಿಯವರು, ಶನಿವಾರಸಂತೆಯ ಪುಟ್ಟಬಸಪ್ಪನವರು ಹೀಗೆ ಅಸಂಖ್ಯಾತ ವೀರರು ತಮ್ಮ ಜೀವವನ್ನು ತ್ಯಾಗಮಾಡಿದ್ದರು. ಬ್ರಿಟಿಷರನ್ನು ಒದ್ದು ಓಡಿಸಿ ಮಂಗಳೂರಿನ ಬಾವುಟಗುಡ್ಡೆ (ಭೀಕರ್ನಕಟ್ಟೆ)ಯಲ್ಲಿ ಬ್ರಿಟಿಷ್ ಧ್ವಜ ಕಿತ್ತೆಸದು ನಮ್ಮ ನಾಡ ಧ್ವಜ ಹಾರಿಸಿದ್ದರು.

ಬಹಳ ತೀವ್ರವಾಗಿ ರೂಪುಗೊಂಡ ಈ ಹೋರಾಟವನ್ನು ಮಟ್ಟಹಾಕಲು ಬ್ರಿಟಿಷರಿಗೆ ನಮ್ಮವರೆ ನೆರವಾದ ಪರಿಣಾಮ ಎಲ್ಲರನ್ನು ಭೀಕರವಾಗಿ ಬ್ರಿಟಿಷರು ಹತ್ಯೆಮಾಡಿದರು. ಅದರಲ್ಲೂ ಕೊಡಗಿನ ಕೊಡ್ಲಿಪೇಟೆಯ ಬಳಿ ಅಪ್ಪಯ್ಯಗೌಡರನ್ನು ಮೋಸದಿಂದ ಸೆರೆಹಿಡಿದು ಮಡಿಕೇರಿಯ ಕೋಟೆ ಆವರಣದಲ್ಲಿ ಅವರ ಕುಟುಂಬದವರ ಸಮ್ಮುಖದಲ್ಲಿಯೆ ನೇಣಿಗೇರಿಸುವ ಮೂಲಕ ಜನರ ಮನಸ್ಸಲ್ಲಿ ಭಯಹುಟ್ಟಿಸಿದರು.

ಅಂದು ಬ್ರಿಟಿಷರಿಗೆ ನೆರವಾದ ನಾಡದ್ರೋಹಿಗಳಿಗೆ ಪದಕಗಳು (ಅಂದು ನೀಡಿದ ಒಂದು ಚಿನ್ನದ ಪದಕದ ಬೆಲೆ 430 ರೂಪಾಯಿಗಳು ಅಂತ ಅಂದಾಜಿಸುತ್ತಾರೆ), ಭೂಮಿ ನೀಡಿದ್ದರ ಪರಿಣಾಮ ಅವನ್ನು ಪಡೆದವರು ಮುಂದೆ ವೈಭೋಗದ ಜೀವನ ಮಾಡಿಕೊಂಡು ಇದ್ದರೆ, ಬ್ರಿಟಿಷರ ವಿರುದ್ದ ಸಿಡಿದೆದ್ದವರು ಅವರ ದಮನಕಾರಿ ನೀತಿಗೆ ತತ್ತರಿಸಿ ಹೋಗಿ ತಮ್ಮ ಆಸ್ತಿಪಾಸ್ತಿ ಕಳೆದುಕೊಂಡು ಅಲೆಮಾರಿಗಳಾಗಿ ಬದುಕುವ ಸ್ಥಿತಿ ಬಂದು ಒದಗಿತು. ಈ ಹೋರಾಟವನ್ನು ಮಟ್ಟಹಾಕಿದ ಮೇಲೆ ಮತ್ತೆ ಯಾವುದೆ ಹೋರಾಟ ನಡೆಯಲಿಲ್ಲ ಅದರ ಪರಿಣಾಮ ಅವರಿಗೆ ಕೊಡಗು ಸ್ವರ್ಗವಾಗಿ ಕಂಡಿತು.

ಇಂತಹ ಹೋರಾಟಗಾರರ ಪುತ್ಥಳಿ ಅನಾವರಣಕ್ಕು ಕೆಲವು ಜನರು ವಿರೋಧಿಸಿದ ಉದಾಹರಣೆ ಇದೆಯೆಂದರೆ ಅವರ ಮನಸ್ಥಿತಿಯನ್ನು ಊಹಿಸಿಕೊಳ್ಳಬೇಕು. ಆದರೆ ಅದೆಲ್ಲವನ್ನು ಮೀರಿ ಸುಬೇದಾರ್ ಗುಡ್ಡೇಮನೆ ಅಪ್ಪಯ್ಯ ಗೌಡರ ಪ್ರತಿಮೆ ಆನಾವರಣಗೊಂಡಿದೆ. ಇಂದೂ ಕೂಡ ಅವರ ಪ್ರತಿಮೆಗೆ ಹಾಗೂ ಮಡಿಕೇರಿ ಕೋಟೆ ಆವರಣದ ಒಳಗಡೆಯ ಅವರನ್ನು ಗಲ್ಲಿಗೇರಿಸಿದ ಸ್ಥಳದ ಸ್ಮಾರಕಕ್ಕೆ ಪುಶ್ಪನಮನ ಸಲ್ಲಿಸಲಾಯಿತು.

ಇಂದು ಈ ಸಂಗ್ರಾಮದ ಬಗ್ಗೆ ಹಲವು ಜನರಿಗೆ ತಿಳಿದಿದೆ ಹಾಗೂ ಹಲವು ಲೇಖಕರು ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ “ಶ್ರೀ ಪುತ್ತೂರು ಅನಂತರಾಜಗೌಡ” ಅವರ ತಂಡ ಶಾಸನಧಾರಿತವಾಗಿ ಸಂಶೋಧನೆ ಮಾಡಿ “ರಾಜಪರಂಪರೆಯ ಕೊಡಗು – ದಕ್ಷಿಣ ಕನ್ನಡ ಗೌಡರು” ಎಂಬ ಪುಸ್ತಕ ಬರೆದಿದ್ದಾರೆ.

ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮವಾದ ಅಮರ ಸುಳ್ಯ ಹೋರಾಟದ ಬಗ್ಗೆ ಎಲ್ಲರಿಗು ತಿಳಿಯಬೇಕು. ನಮ್ಮ ರಾಜ್ಯ ಸರಕಾರವು ಅಕ್ಟೋಬರ್‌ 31ರ ದಿನವನ್ನು “ಕರ್ನಾಟಕ ರಾಜ್ಯ ಹುತಾತ್ಮರ ದಿನಾಚರಣೆಯ ದಿನ” ಎಂದು ಪ್ರತಿವರ್ಷ ಆಚರಣೆ ಮಾಡಬೇಕು. ಅಂದು ಮಡಿದವರೆಲ್ಲರಿಗು ಮತ್ತೊಮ್ಮೆ ಭಾವಪೂರ್ಣ ನಮನಗಳನ್ನು ಸಲ್ಲಿಸೋಣ!

~ ಶಶಿಕುಮಾರ್ ಗೌಡ

error: Content is protected !!