fbpx

ಅಕಾಲಿಕ ಮಳೆ,ಬೆಳೆಗಾರರು ಕಂಗಾಲು, ಸ್ಪಿಂಕ್ಲೆರ್ ನಲ್ಲಿ ಕಾಫಿ ಗಿಡಗಳಿಗೆ ನೀರು

ವರದಿ: ಲಕ್ಷ್ಮಿಕಾಂತ್ ಕೊಮರಪ್ಪ

ಕೊಡಗು(ಸೋಮವಾರಪೇಟೆ ): ಕಳೆದ ವರ್ಷದ
ಮುಂಗಾರು ಮಳೆಯಿಂದ ಕೃಷಿಕರು
ಬೇಸತ್ತಿದ್ದರು. ಪ್ರಸಕ್ತ ವರ್ಷ ಮುಂಗಾರು
ಮಳೆಗಾಗಿ ಕಾಫಿ ಬೆಳೆಗಾರರು
ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.
ಮಳೆಗಾಗಿ ಕೆಲವೆಡೆ ದೇವರಿಗೆ ಹರಕೆ
ಹೊರುತ್ತಿದ್ದಾರೆ. ತಾಲ್ಲೂಕಿನ ಕಾಫಿ
ಬೆಳೆಗಾರರು ಆತಂಕಕ್ಕೀಡಾಗಿದ್ದು,
ಮಳೆಗಾಲದಲ್ಲಿ ಸ್ಪ್ರಿಂಕ್ಲರ್ ಮೂಲಕ ಕಾಫಿ ಬೆಳೆಗಾರರು
ತೋಟಗಳನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ
ಮುಂದಾಗಿದ್ದಾರೆ.

ಗ್ರಾಮೀಣ ಭಾಗದಲ್ಲಿ ಸುಸ್ಥಿತಿಯಲ್ಲಿರುವ
ಕೊಳವೆಬಾವಿಗಳು ಬೆಳೆಗಾರರ
ಕೈಹಿಡಿಯುತ್ತಿವೆ. ದಿನದಿಂದ ದಿನಕ್ಕೆ
ಅಂತರ್ ಜಾಲ ಕಡಿಮೆಯಾಗುತ್ತಿದ್ದು, ಕೆಲವು
ಕೊಳವೆಬಾವಿಗಳಲ್ಲಿ ನೀರು
ಕಡಿಮೆಯಿರುವುದರಿಂದ ಕೆಲ ಬೆಳೆಗಾರರು
ತೋಟಕ್ಕೆ ಸ್ಪ್ರಿಂಕ್ಲರ್ ಮಾಡಲು ಹಿಂದೇಟು
ಹಾಕಿ, ಮಳೆಗಾಗಿ ಕಾಯುತ್ತಿದ್ದಾರೆ. ಜುಲೈ
ತಿಂಗಳಲ್ಲಿ ನಾಲ್ಕೈದು ದಿನ ಸಾಧಾರಣ ಮಳೆ
ಸುರಿದರೂ, ಬಹುತೇಕ ನೀರಾವರಿ ಕೆರೆಗಳು,
ಹೊಳೆ, ತೊರೆಗಳು ತುಂಬಿಲ್ಲ.

ಇಂತಹ ಜಲಮೂಲಗಳಿಂದ ನೀರು
ಸಿಗದಿರುವುದರಿಂದ ಆತಂಕ ಎದುರಾಗಿದೆ.
ಕಳೆದ ಹತ್ತು ದಿನಗಳಿಂದ ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಫಿ ತೋಟಗಳಲ್ಲಿ ಮಣ್ಣಿನಲ್ಲಿ ತೇವಾಂಶ ಇಲ್ಲದಂತಾಗಿದೆ. ಮುಂಗಾರು ಮಳೆಯನ್ನು
ನಂಬಿ ಈಗಾಗಲೇ ರಾಸಾಯನಿಕ ಗೊಬ್ಬರ ಹಾಕಿದವರು, ಮಳೆಯಿಲ್ಲದೆ ಪರದಾಡುತ್ತಿದ್ದಾರೆ. ಗಿಡದ ಬುಡದಲ್ಲೇ ಗೊಬ್ಬರ ಒಣಗುತ್ತಿದ್ದು, ಬೆಳೆಗಾರರು ನಷ್ಟ
ಅನುಭವಿಸಬೇಕಾಗಿದೆ.

ಕಾಫಿ ತೋಟಗಳಲ್ಲಿರುವ ಕಾಳುಮೆಣಸು
ಬಳ್ಳಿಗಳನ್ನು ರಕ್ಷಿಸಿಕೊಳ್ಳಲು ಬೆಳೆಗಾರರು
ಕೊಳವೆಬಾವಿಗಳಿಗೆ ಮೊರೆ ಹೋಗಿದ್ದಾರೆ.
ದಿನವಿಡಿ ಕಾಫಿ ತೋಟಗಳಿಗೆ ನೀರು
ಹಾರಿಸುತ್ತಿದ್ದಾರೆ. ಹೀಗೆ ಬಿಸಿಲು
ಮುಂದುವರಿದರೆ, ಕಾಫಿ ಗಿಡಗಳನ್ನು
ಬಾಧಿಸುವ ಬಿಳಿಕಾಂಡಕೊರಕ ಹಾವಳಿ
ಮಿತಿಮೀರಲಿದ್ದು, ಫಸಲು ನಷ್ಟವಾಗುವ
ಆತಂಕ ಎದುರಾಗಿದೆ. ಒಮ್ಮೆ
ಬಿಳಕಾಂಡಕೊರಕ ಹಾವಳಿ ಹೆಚ್ಚಾದರೆ,
ನಿಯಂತ್ರಣ ಬಹಳ ಕಷ್ಟವಾಗಲಿದೆ.
ಕೀಟಬಾಧೆ ಹೆಚ್ಚಾಗಿ, ಆರೋಗ್ಯ ಕಾಫಿ
ಗಿಡಗಳನ್ನು ಕಳೆದುಕೊಂಡು ಫಸಲು
ನಷ್ಟವಾಗಲಿದೆ.

ಅತೀ ಹೆಚ್ಚು ಅರೇಬಿಕಾ ಕಾಫಿ
ಬೆಳೆಯುವ ಶನಿವಾರಸಂತೆ, ಕೊಡ್ಲಿಪೇಟೆ,
ಸೋಮವಾರಪೇಟೆ ಕಸಬಾ ಹೋಬಳಿಗಳಲ್ಲಿ
ಹೆಚ್ಚಿನ ಬೆಳೆಗಾರರು ಬೋರ್‍ವೆಲ್‍ಗಳಿಂದ
ಸ್ಪ್ರಿಂಕ್ಲರ್ ಮಾಡಿ, ಹೂ ಅರಳಿಸಿದ್ದರು. ಈಗ
ಕಾಫಿ ಗಿಡ ಹಾಗು ಫಸಲನ್ನು ಉಳಿಸಿಕೊಳ್ಳಲು
ಮತ್ತೊಮ್ಮೆ ಸ್ಪ್ರಿಂಕ್ಲರ್ ಮೊರೆ ಹೋಗಿದ್ದಾರೆ.
ಕಳೆದ ವರ್ಷದ ಮಳೆಯಿಂದ ಕಾಫಿ
ತೋಟಗಳು ಹಾಳಾಗಿದ್ವು. ಈಗಲೂ ಕಾಫಿ
ಗಿಡಗಳು ಸುಧಾರಿಸಿಲ್ಲ.

ಎಲೆಗಳು ಆರೋಗ್ಯವಾಗಿಲ್ಲ. ಆದರೂ ಬೆಳೆಗಾರರು
ತೋಟದ ನಿರ್ವಹಣೆಯನ್ನು ಕೈಬಿಡದೆ, ಬೆಲೆ
ಏರಿಕೆಯ ನಡುವೆ ರಾಸಾಯನಿಕ
ಗೊಬ್ಬರಗಳನ್ನು ಹಾಕಿ, ಶಿಲೀಂದ್ರ ನಾಶಕ,
ಕೀಟನಾಶಕಗಳನ್ನು ಸಿಂಪಡಿಸಿ ಮಳೆಗಾಗಿ
ಕಾಯುತ್ತಿದ್ದರು. ಆದರೆ ಮುಂಗಾರು
ಮಾಯವಾಗಿ, ಬೆಳೆಗಾರರ ನೆಮ್ಮದಿಯನ್ನು
ಕಸಿದುಕೊಂಡಿದೆ.

ಸೋಮವಾರಪೇಟೆ ತಾಲೂಕಿನಲ್ಲಿ
ಅರೇಬಿಕಾ ಕಾಫಿಯನ್ನು ಬೆಳೆಯಲು ಸೂಕ್ತ
ಪ್ರದೇಶ ಹಾಗು ಸೂಕ್ತ ಹವಾಮಾನದ
ಹಿನ್ನೆಲೆಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ.
ರೋಬಸ್ಟಾ ಕಾಫಿಗೆ ಹೋಲಿಸಿದರೆ, ಅರೇಬಿಕಾ
ಕಾಫಿಗೆ ಉತ್ಪಾದನಾ ವೆಚ್ಚ ಜಾಸ್ತಿ,
ರೋಗಬಾಧೆಯೂ ಜಾಸ್ತಿ, ತೋಟ
ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ,
ತೋಟಗಳು ರೋಗಪೀಡಿತವಾಗುತ್ತವೆ. ಈ
ಕಾರಣದಿಂದ ಬೆಳೆಗಾರರು ಸ್ಪ್ರಿಂಕ್ಲರ್ ಮೊರೆ
ಹೋಗಿದ್ದಾರೆ.

ಒಟ್ಟು ತಾಲೂಕಿನಲ್ಲಿ 28,590
ಹೆಕ್ಟೇರ್‍ನಲ್ಲಿ ಕಾಫಿ ಬೆಳೆಯಲಾಗುತ್ತಿದೆ.
22,900 ಹೆ.ನಲ್ಲಿ ಅರೇಬಿಕಾ ಕಾಫಿ ಹಾಗು
5690 ಹೆ.ನಲ್ಲಿ ರೋಬಸ್ಟಾ ಕಾಫಿ
ಬೆಳೆಯಲಾಗುತ್ತಿದೆ. ಕಾಫಿ ಮಂಡಳಿಯ
ಪ್ರಕಾರ ತಾಲ್ಲೂಕಿನಲ್ಲಿ ನಾಲ್ಕು ವಿಭಾಗಗಳಿದ್ದು,
ಸೋಮವಾರಪೇಟೆಯಲ್ಲಿ 6,900
ಹೆಕ್ಟೇರ್‍ನಲ್ಲಿ ಅರೇಬಿಕಾ, 400 ಹೆ.ನಲ್ಲಿ
ರೋಬಸ್ಟಾ ಸೇರಿದಂತೆ 7,300 ಹೆ.ನಲ್ಲಿ ಕಾಫಿ
ಬೆಳೆಯಲಾಗುತ್ತಿದೆ. ಶನಿವಾರಸಂತೆಯಲ್ಲಿ
6,740ಹೆ. ನಲ್ಲಿ ಅರೇಬಿಕಾ, 270ಹೆ.ನಲ್ಲಿ
ರೋಬಸ್ಟಾ ಸೇರಿದಂತೆ 7,010,ಹೆ. ಕಾಫಿ
ಬೆಳೆಯಲಾಗಿದೆ. ಸುಂಟಿಕೊಪ್ಪದಲ್ಲಿ
6,660ಹೆ.ನಲ್ಲಿ ಅರೇಬಿಕಾ ಮತ್ತು 3,820ಹೆ.
ರೋಬಸ್ಟಾ, ಒಟ್ಟು 10,480 ಹೆ.,
ಮಾದಾಪುರದಲ್ಲಿ 2,600ಹೆ. ಅರೇಬಿಕಾ
ಮತ್ತು 1200ಹೆ. ರೋಬಸ್ಟಾ, ಸೇರಿದಂತೆ
3,800 ಹೆಕ್ಟೇರ್‍ನಲ್ಲಿ ಕಾಫಿ ಬೆಳೆಯಲಾಗುತ್ತಿದೆ.
ಒಟ್ಟಿನಲ್ಲಿ ಮುಂಗಾರು ವಿಳಂಬ ಅರೇಬಿಕಾ
ಕಾಫಿ ಬೆಳೆಗಾರರ ನಿದ್ದೆಗೆಡಿಸಿದೆ.

error: Content is protected !!