fbpx

“ಅಂದು ಬೆಂಗಳೂರು ಬೇಕು, ಇಂದು ಬೆಂಗಳೂರು ಸಾಕು.(?)‌‌‌‌‌‌”

ಶಿರಿನ್ ವಿಶ್ವನಾಥ್.

ಬೆಂಗಳೂರು ಎಂದರೆ ನಮ್ಮ ಕರುನಾಡು ಮಾತ್ರವಲ್ಲ ಭಾರತ ದೇಶದ ಹೆಮ್ಮೆಯ ನಗರ. ರಸ್ತೆ ಬದಿಯ ಗಾಡಿಗಳಲ್ಲಿನ ಮಾರಾಟದಿಂದ ಹಿಡಿದು ಪಂಚತಾರಾ ಹೋಟೆಲ್ಗಳೂ, ಬೀದಿ ವಾಪಾರಿಗಳಿಂದ ಹಿಡಿದು ಪ್ರತಿಷ್ಠಿತ ಉದ್ಯಮಗಳಿಂದ, ಭಿಕ್ಷೆ ಬೇಡುವವರಿಂದ ಹಿಡಿದು ಕೋಟ್ಯಂತರ ಹಣ ವ್ಯಯಿಸುವವರರೂ, ಯಾರೇ ಬಂದರೂ ಬದುಕಿನ ಗೂಡು ಕಟ್ಟಲು ವಿಶಾಲ ಹೃದಯದಿಂದ ಬಡವ – ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲ ಬಗೆಯ ಜನರನ್ನೂ ಆಲಿಂಗಿಸಿಕೊಂಡು ಜೀವನ ಕೊಡುತ್ತಾ ಇರುವ ಅದ್ಬುತ ನಗರ.

ಆದರಿಂದು “ಕರೋನ ವೈರಾಣು” ಎನ್ನುವ ಹೆಮ್ಮಾರಿಗೆ ಸಿಲುಕಿ ಪರಿತಪಿಸುವಂತಾಗಿರುವುದು ವಿಪರ್ಯಾಸ. ‌‌‌‌‌‌‌ ಕೋವಿಡ್ -೧೯ ಬಗ್ಗೆ ಭಯ ಬೇಡ, ಎಚ್ಚರಿಕೆಯಿಂದಿರಬೇಕು, ಆತಂಕಕ್ಕೆ ಒಳಗಾಗಬಾರದು, ಮುಂಜಾಗ್ರತೆಯ ನಿಯಮಗಳನ್ನು ಪಾಲಿಸಬೇಕು ಎನ್ನುವುದು ವೈದ್ಯರಿಂದಾದಿಯಾಗಿ, ವಿಚಾರವಂತರು, ಜನಪ್ರತಿನಿಧಿಗಳು ದಿನನಿತ್ಯ ಹೇಳುತ್ತಿರುವ ಮಾತುಗಳು.

ಮೂರು-ನಾಲ್ಕು ತಿಂಗಳಿಂದ ಮಾತುಗಳನ್ನುಕೇಳಿಸಿಕೊಂಡ ನಾವುಗಳು ದಾರಿ ತಪ್ಪಿದೆಲ್ಲಿ? ದಿನದಂದ ದಿನಕ್ಕೆ ಹೆಚ್ಚಾಗಿರುವ ಸೋಂಕಿತರಿಂದ ನಮ್ಮ ರಾಜಧಾನಿ ಸಹ “ಹಾಟ್ ಸ್ಪಾಟ್” ಆಗುತ್ತಾ ಇರವುದು ಎಲ್ಲರಿಗೂ ತಿಳಿದಿರುವ ಸತ್ಯ.

ಆದರೆ ಹೀಗಾಗೋಕೆ ಕಾರಣ ಕರ್ತರಾರು? ‌‌‌ ‌‌‌‌ ಹತ್ತು-ಹಲವು ವರ್ಷ ಗಳಿಂದ ಜೀವನವನ್ನರಸಿ ಬಂದವರೇ ಇಂದು ಬದುಕಿನ ನಿರ್ವಹಣೆ ಗೋಸ್ಕರ, ತಮ್ಮ ಪ್ರಾಣ ರಕ್ಷಣೆ ಗೋಸ್ಕರ ನಗರಕ್ಕೆ ವಿದಾಯ ಹೇಳಿ ತಮ್ಮ ತಮ್ಮ ಊರುಗಳಿಗೆ ತೆರಳುವುದನ್ನು ನೋಡಿದರೇ ಆತಂಕ ಮನೆ ಮಾಡುತ್ತಿದೆ. “ಬೆಂದಕಾಳೂರು” ಊರು ಎಂಬ ಹಳೇ ಪೊರೆ ಕಳಚಿ ನಗರ ಎಂಬ ಹೊಸ ಪೊರೆ ಧರಿಸಿ ಹನುಮಂತನ ಬಾಲದಂತೆ ಬೆಳೆಯುತ್ತಲೆ ಇದೆ. ಬೆಂಗಳೂರಿನಲ್ಲಿ ಒಂದು ಸ್ವಂತ ಮನೆಯಿದ್ರೆ ಸಾಕು ಎನ್ನುವಷ್ಟರ ಮಟ್ಟಿಗೆ ಜನರ ಮನಸ್ಸಿನಲ್ಲಿ ಬೆಸೆದುಕೊಡಿದ್ದ ಬೆಂಗಳೂರಿನ ಭಾಂಧವ್ಯವಿಂದು ನಮ್ಮ ಜನರಿಗೇಕೆ ಬೇಡವಾಗುತ್ತಿದೆ?? ಊರಿಗೆ ಹೋದವರ ಬದುಕು ಅಲ್ಲಿ ಹಸನಾದರೆ ಸಂತೋಷ ಇಲ್ಲದಿದ್ದರೆ ಅವರ ಗತಿಯೇನು?? “ಬದುಕಿದ್ದೆ ಬಡಜೀವ” ಎಂಬಂತೆ ಗಂಟುಮೂಟೆ ಕಟ್ಟಿ ಹೊರಡುತ್ತಿರುವ ದೃಶ್ಯಗಳು ಪ್ರಪಂಚದಲ್ಲೇ ಖ್ಯಾತಿಗಳಿಸಿರುವ ಬೆಂಗಳೂರಿನಂತಹ ನಗರಕ್ಕೆ “ಶೋಭೆ ” ತರುವಂತಿಲ್ಲ. ‌‌‌‌

ಇಲ್ಲಿಯೇ ಹುಟ್ಟಿ ಬೆಳೆದವರಿಗೆ ಇಂದಿನ ಮಾಲಿನ್ಯ ರಹಿತ ಪರಿಸರ, ದಟ್ಟ ಜನಸಂದಣಿ ರಹಿತವಾದ ( ತಕ್ಕ ಮಟ್ಟಿಗೆ) ಬೆಂಗಳೂರು ಇಷ್ಟವಾದರೂ ಮನಸ್ಸಿನ ಮೂಲೆಯಲ್ಲಿ “ಬಿಕೋ” ಎಂಬ ಭಾವನೆ. ಬದುಕು ಕಟ್ಟಿಕೊಟ್ಟ ಬೃಹತ್ ನಗರದಿಂದ ಜನರು ವಲಸೆ ಹೋಗಲು ಕಾರಣಗಳೇನು??? ಮೊದ ಮೊದಲು ‌ಉತ್ತಮವಾಗಿ ಕಾರ್ಯ ನಿರ್ವಹಿಸಿದ ಸರಕಾರದ ಈಗಿನ ವಿಫಲತೆಯೋ, ಬದುಕನ್ನು ನಡೆಸಲಾಗದ ದುಃಸ್ಥಿತಿಯೋ, “ಜೀವನ”ಕ್ಕಿಂತ “ಜೀವ” ಮುಖ್ಯ ಎಂಬ ನಮ್ಮಲ್ಲಿನ ಮನೋಭಿಲಾಷೆಯೋ ಏನೋ ಅರಿಯದಾಗಿದೆ.

ಅವಶ್ಯವಾಗಿ ಸರಕಾರ, ಅಧಿಕಾರಿಗಳು, ಉದ್ಯಮಿಗಳು, ರಾಜ್ಯದ ನಾಯಕರು ಇದರತ್ತ ಗಮನಹರಿಸಬೇಕಾಗಿದೆ. ಕೋವಿಡ್ – ೧೯ ಎನ್ನುವ ಮಹಾಮಾರಿ ಆದಷ್ಟು ಬೇಗ ನಿಯಂತ್ರಣಕ್ಕೆ ಬಂದರೇ ಸುಧಾರಣೆ ಆಶಿಸಬಹುದಾಗಿದೆ. ಕನಸು ಕಟ್ಟಿ ಕೊಟ್ಟ ನಮ್ಮ ನಗರ ಜನರ ಆಶಯಗಳನ್ನು ನನಸು ಮಾಡುವಂತಾಗಲಿ. “ಸದಾಶಯ”ಗಳೊಂದಿಗೆ ಬಂದವರು ರಾಜಧಾನಿಯಲ್ಲಿ ನೆಲೆ ಕಂಡುಕೊಳ್ಳುವಂತಾಗಲಿ ಎನ್ನುವುದೇ “ನನ್ನ ಆಶಯ”.

ಶಿರಿನ್ ವಿಶ್ವನಾಥ್.

error: Content is protected !!