fbpx

ಅಂದು ಆತ ಇಲ್ಲದಿದ್ದರೆ, ಇಂದು ನಾನು ಇರುತ್ತಿರಲಿಲ್ಲ: ಸುಬೇದಾರ್ ಹೊದೆಟ್ಟಿ ಸಂಪತ್ ಕುಮಾರ್

Episode 5

ರಾಷ್ಟ್ರ ರಕ್ಷಕರು

ಗಿರಿಧರ್ ಕೊಂಪುಳಿರ, ಅಂಕಣಕಾರರು ಹಾಗು ಪ್ರಧಾನ ವರದಿಗಾರರು

ಕಡು ಬಡತನದ ಕುಟುಂಬ, ಕುಟುಂಬ ನಿರ್ವಹಣೆಗೊಂದು ಕೆಲಸ ಬೇಕು ಎಂದು ಸೈನಿಕನಾಗಿ ದೇಶ ಸೇವೆ ಮಾಡಿ ಬಂದಿರುವ ವೀರ ಪುತ್ರ ಸುಬೇದಾರ್ ಹೊದೆಟ್ಟಿ ಸಂಪತ್ ಕುಮಾರ್ ಇದ್ದಾರೆ ಇಂದಿನ “ರಾಷ್ಟ್ರರಕ್ಷಕರು” ಅಂಕಣದಲ್ಲಿ.

1964, ಅಕ್ಟೋಬರ್ 18 ರಂದು ಪೆರಾಜೆ ಗ್ರಾಮದ ಹೊದೆಟ್ಟಿ ಕುಟುಂಬದಲ್ಲಿ ಚೆಂಗಪ್ಪ ಮತ್ತು ಮುತ್ತಮ್ಮ ದಂಪತಿಗಳ ಐವರು ಮಕ್ಕಳಲ್ಲಿ ನಾಲ್ಕನೆಯವರಾಗಿ ಜನಿಸಿದರು. ಕೃಷಿ ಪ್ರಧಾನದ ತುಂಬು ಕುಟುಂಬ ಜೊತೆಗೆ ಬಡತನ ಕೂಡ. ಕುಟುಂಬ ನಿರ್ವಹಣೆಯ ಜವಬ್ದಾರಿ ನಾಲ್ವರು ಗಂಡು ಮಕ್ಕಳ ಮೇಲಿತ್ತಾದರೂ ಸರ್ಕಾರಿ ಕೆಲಸ ಬೇಕು ಎಂದಾದರೆ ಸೇನೆಗೆ ಸೇರುವುದು ಒಂದೇ ಆಯ್ಕೆ.

ಪ್ರಾಥಮಿಕ ಶಿಕ್ಷಣವನ್ನು ಪೆರಾಜೆಯ ಕುಂಬಳಕೇರಿ ಶಾಲೆಯಲ್ಲಿ ಮುಗಿಸಿ, ಹೈಸ್ಕೂಲ್ ಸಂಪಾಜೆಯಲ್ಲಿ ವಿದ್ಯಾರ್ಥಿ ನಿಲಯದಲ್ಲಿ ಇದ್ದುಕೊಂಡು ಓದಿದರು, ಬಳಿಕ ಇಲ್ಲಿಗೆ ಸಮೀಪವೇ ಇದ್ದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಎರಡನೇ ಪಿಯುಸಿ ವೇಳೆ ಮಂಗಳೂರಿನಲ್ಲಿ ಸೇನಾ ಆಯ್ಕೆ ಪ್ರಕ್ರಿಯೆಗೆ ತೆರಳಿದರು ಬಳಿಕ ಮರಾಠಾ ಲೈಟ್ ಇನ್ಫೆಂಟ್ರಿ ತರಬೇತಿಯನ್ನು ಬೆಳಗಾವಿಯಲ್ಲಿ ಮುಗಿಸಿ ಆಯ್ಕೆಯಾದರು. ಇಲ್ಲಿಗೆ ಶಿಕ್ಷಣ ಮೊಟಕುಗೊಳಿಸಿ ಮುಂದೆ ಓದುವ ಯೋಚನೆಯನ್ನೂ ಮಾಡದೆ 1983,ಮಾರ್ಚ್ 18 ರಂದು ಭಾರತೀಯ ಸೇನೆಯಲ್ಲಿ ಸೇವೆ ಆರಂಭಿಸಿದರು.

ಸುಬೇದಾರ್ ಹೊದೆಟ್ಟಿ ಸಂಪತ್ ಕುಮಾರ್

ಭಾರತ ಚೀನಾ ಗಡಿಯಾದ ಅರುಣಾಚಲ ಪ್ರದೇಶದ ಥವಾಂಗ್ ಪ್ರದೇಶದಲ್ಲಿ ಮೊದಲ ಸೇವೆ ಆರಂಭಿಸಿದ ಸೂಕ್ತ ಗಡಿ ಪ್ರದೇಶವಾಗಲಿ,ರಸ್ತೆಗಳಾಗಲಿ ಇರಲಿಲ್ಲ ಒಂದೆಡೆ ಅರುಣಾಚಲ ಪ್ರದೇಶ ಮತ್ತೊಂಡೆ ಚೈನಾ ಗಡಿ,ಇಲ್ಲಿ ಇವರಿಗೆ ರಸ್ತೆಗಳನ್ನು ಮಾಡುವ ಕೆಲಸ ಮಾಡಬೇಕಿತ್ತು. ಇಲ್ಲಿಂದ ಮಿಲಾನಾಗೊಲಾ ಎನ್ನುವಲ್ಲಿಗೆ ಇವರ ರೆಜಿಮೆಂಟ್ ಬಂದ ನಂತರ 25 ಕಿಲೋಮೀಟರ್ ಕ್ರಮಿಸಿ ರಸ್ತೆ ಮಾಡಿದರು.

ಇಷ್ಟು ಕ್ರಮಿಸಲು ಕಿಲೋಮೀಟರ್ ಕ್ರಮಿಸಲು ಇವರಿಗೆ ಎರಡು ದಿನಗಳು ಬೇಕಾಗುತ್ತಿತ್ತು,ಊಹಿಸಿಕೊಳ್ಳಿ!! ಅಲ್ಲಿನ ರಸ್ತೆ ಪರಿಸ್ಥಿತಿ. ಬಳಿಕ 1984 ರಲ್ಲಿ ರಾಜಸ್ಥಾನದ ಅಲುವಾರ್ ಎನ್ನುವ ಪ್ರದೇಶದಲ್ಲಿ ಮೂರು ವರ್ಷ,ಜಮ್ಮು ಸೆಕ್ಟರ್, ಪಂಜಾಬ್ ನ ಫಿರೋಜ್ ಬಾದ್ ಮತ್ತೆ ಜಮ್ಮುವಿನಲ್ಲಿ ಎರಡು ವರ್ಷ ಪೂರೈಸಿದರು. ಬಹುತೇಕ ಇವರು ಕರ್ತವ್ಯ ನಿರ್ವಹಿಸಿದ್ದು ಪಾಕಿಸ್ಥಾನದ ಗಡಿ LOC ಮತ್ತು ಚೀನಾ ಗಡಿ LAC ನಲ್ಲಿ ಕಡೆಗೆ 2003 ರಲ್ಲಿ ಸಿಕಂದರಾ ಬಾದ್ ನಲ್ಲಿ ನಿವೃತ್ತಿ ಹೊಂದಿದರು.

ಇಷ್ಟೆಲ್ಲಾ ಇವರದು ಕರ್ತವ್ಯ ನಿರ್ವಹಿಸಿದ ಸೇನಾ ನೆಲೆಗಳಾದರೆ ಸುಧೀರ್ಘ ಸೇವೆಯಲ್ಲಿನ ಅನುಭವಗಳು ಮತ್ತು ಆಪತ್ತಿನಲ್ಲಿ ಕಾಪಾಡಿದ ಆಪ್ತಮಿತ್ರನ ವಿಚಾರಗಳು ಮುಂದೆ ಬರುತ್ತದೆ ಓದಿ.

ಮನೆಯಲ್ಲಿ ಬಡತನ ಮತ್ತು ದೇಶ ಸೇವೆ ನಿಟ್ಟಿನಲ್ಲಿ ಸೇನೆ ಸೇರಿದ ಸಂಪತ್ ಕುಮಾರ್, ಬರುತ್ತಿದ್ದ ಅಂದಿನ ಕಾಲದ ದೊಡ್ಡ ಮೊತ್ತ ಇವರ ಸಂಬಳ ಇದ್ದದು ಅಲ್ಪ ರುಪಾಯಿಗಳು. ಈಗಿನ ರೀತಿಯಲ್ಲಿ ಬ್ಯಾಂಕಿಗ್ ಸೇವೆಯಾಗಿ, ಆನ್ ಲೈನ್ ಪೇಮೆಂಟ್ ಬಗ್ಗೆ ಹಣಕಾಸು ವ್ಯವಹಾರಗಳು ಗ್ರಾಮಾಂತರ ಪ್ರದೇಶದಲ್ಲಂತೂ ಇರಲಿಲ್ಲ. ಇವರ ನೆರವಿಗೆ ಬರುತಿದ್ದದ್ದು ಅಂಚೆ ಮತ್ತು ಪೋಸ್ಟ್ ಮಾಸ್ಟರ್.

ಕೈಗೆ ಸಂಬಳ ಬರುತ್ತಿದಂತೆ ಪೋಸ್ಟ್ ಮಾಸ್ಟರಿಗೆ ಮನಿ ಆರ್ಡರ್ ಬರುತ್ತಿತ್ತು. ಒಂದು ವೇಳೆ ತಡವಾದರೆ ಅದನ್ನು ಪೋಸ್ಟ್ ಮಾಸ್ಟರ್ ತಮ್ಮ ಕೈಯಿಂದ ಹಣ ಹಾಕಿ, ಇವರ ಅಮ್ಮ ಮುತ್ತಮ್ಮರಿಗೆ ತಲುಪಿಸುತ್ತಿದ್ದರು.  ರಜೆಯಲ್ಲಿ ಬಂದಾಗ ಪೋಸ್ಟ್ ಮಾಸ್ಪರ್ ಗೆ ಹಣ ಸಂದಾಯವಾಗುತ್ತಿತ್ತು. ಇನ್ನು ಇವರಿಗೆ ಆರಂಭದಲ್ಲಿ ರಜೆಗಳು ಅಷ್ಟು ಸುಲಭವಾಗಿ ಸಿಗುತ್ತಲೂ ಇರಲಿಲ್ಲ…

ಪಾಕ್ ಗಡಿಯಲ್ಲಿನ ಉಡಿ ಸೆಕ್ಟರ್ ನಲ್ಲಿ ಎರಡು ವರ್ಷ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ಆದ ಕೆಲವು ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇದೆ ಎನ್ನುತ್ತಾರೆ ಸಂಪತ್ ಕುಮಾರ್,ಬಂಕರ್,ಟ್ರೆಂಚ್ ಗಳಲ್ಲೇ ಗಡಿ ಕಾಯ್ದುಕೊಂಡಿರಬೇಕಾದ ಸ್ಥಿತಿಯಲ್ಲಿರುತ್ತಿದ್ದ, ಇವರಿಗೆ ಸ್ವಾತಂತ್ರ್ಯ ದಿವಸ ಮತ್ತು ಗಣರಾಜ್ಯೋತ್ಸವದ ದಿನ ಪಾಪಿ ಪಾಕಿಗಳು ಮೈಮೇಲೆ ದೆವ್ವ ಮೆಟ್ಟಿಕೊಂಡಂತೆ ಮೂರು ದಿನಗಳ ಕಾಲ ನಿರಂತರ ದಾಳಿ ಮಾಡುತ್ತಿದ್ದರು.

ಭಾರತೀಯ ಯೋಧರನ್ನು ಕಂಡರೆ ಅದೆಲ್ಲಿಂದ ಗುಂಡು ಹಾರಿ ಬರುತ್ತದೋ ಗೊತ್ತಿಲ್ಲ. ಕಣ್ಣ ಮುಂದೆಯೇ ಜೊತೆಗಿದ್ದ ಸೈನಿಕರು ನೆಲಕುರುಳುತ್ತಿದ್ದರು. ಕೆಲವೊಂದು ಭಾರಿ ಶೆಲ್ (Artilery shell) ಮಾದರಿಯ ಗುಂಡನ್ನು ಭಾರತದ ಗಡಿಯತ್ತ ನುಗ್ಗಿಸುತ್ತಿದ್ದರು ಪಾಕಿಗಳು. 50ಅಡಿ ಎತ್ತರಕ್ಕೆ 45 ಡಿಗ್ರಿಯಾಗಿ ಬಾಗಿಸಿ ಬರುತ್ತಿದ್ದ ಶೆಲ್ ಗಳು ಗಾಳಿಯಲ್ಲೇ ಸ್ಪೋಟಗೊಳ್ಳುತ್ತಿದ್ದವು. ಹೀಗೆ ಸ್ಪೋಟ ಸಂದರ್ಭ ಚಿಮ್ಮುವ ಸಣ್ಣ ಪ್ರಮಾಣದ ವಿಷಕಾರಿ ಚೂರುಗಳು ದೇಹಕ್ಕೆ ಹೊಕ್ಕಿದರೆ ಸಾಕು ಯೋಧನ ಕಥೆ ಮುಗಿದಂತೆ!

ಹೀಗೆ ಒಂದು ಬಾರಿ ಬಂದ ಶೆಲ್ ನಲ್ಲಿನ ಚೂರು ಯುವ ಯೋಧನೊಬ್ಬನ ಹೊಟ್ಟೆಗೆ ತಗುಲಿ ಅಲ್ಲೇ ಪ್ರಾಣ ಬಿಟ್ಟಿದ್ದಾನೆ,ಇಂತಹದೆಲ್ಲವೂ ನಿರಂತರವಾಗಿ ನಡೆಯುತ್ತಲೇ ಇದ್ದರು ಅದು ಮಾತ್ರ ಬಹಿರಂಗವಾಗುತ್ತಿರಲಿಲ್ಲ. ಕಾರಣ ಅಂದಿನ ಕಾಲದಲ್ಲಿ ಪತ್ರಿಕೆ ಮಾಧ್ಯಮಗಳಿಗೂ ಈ ಸುದ್ದಿಗಳು ಮುಟ್ಟುತ್ತಿರಲಿಲ್ಲ. ಮತ್ತೊಂದು ಘಟನೆಯಲ್ಲಿ ಬಂಕರ್ ನ ಸಿಗ್ನಲ್ಸ್ ನಲ್ಲಿ ಇದ್ದ ಯೋಧನಿಗೆ ಏಕಾಏಕಿ ಬೆನ್ನಿನ ಭಾಗಕ್ಕೆ ಗುಂಡು ತಗುಲಿ ಅಸುನೀಗಿದ್ದೂ ಇದೆ ಎಂದು ನೆನಪಿಸಿಕೊಳ್ಳುತ್ತಾರೆ.

ಆಪ್ತ ಮಿತ್ರ ಶೇರಾ ಅವರೊಂದಿಗೆ ಹೊದೆಟ್ಟಿ ಸಂಪತ್ ಕುಮಾರ್

ಆಪ್ತಮಿತ್ರನ ಖುಣ: ಚಳಿಗಾಲದಲ್ಲಿ ಸಾಮಾನ್ಯವಾಗಿ ಯಾವುದೇ ಗುಂಡಿನ ಮೊರೆತ ಕೇಳಿ ಬರುವುದಿಲ್ಲ. ಈ ಸಂದರ್ಭ LOC ಭಾಗದಲ್ಲಿ ಯಾವುದೇ ಚಟುವಟಿಕೆಗಳಿರುವುದಿಲ್ಲ. ಹಾಗಾಗಿ ಶಶಿ ಪೋಸ್ಟ್ ಎನ್ನುವಲ್ಲಿ ಕೇವಲ ಯೋಧರು ಮಾತ್ರ ಗಸ್ತಿನಲ್ಲಿರುತ್ತಾರೆ.
ಹೀಗೆ 2000ರ ಮಾರ್ಚ್ 11, ಇವರು ಮರೆಯಲಾಗದ ಕ್ಷಣ ನೆನಪಿಸಿಕೂಳುತ್ತಾರೆ. ಈ ರೋಚಕ ಕ್ಷಣ ಇಲ್ಲಿದೆ ನೋಡಿ.

ಚಳಿಗಾಲದಲ್ಲಿ ಯಾವುದೇ ಚಟುವಟಿಕೆಗಳು ಇಲ್ಲದ ಕಾರಣ ನಿಧಾನವಾಗಿ ಉಗ್ರರು ದೇಶದ ಗಡಿಯೊಳಗೆ ನುಗ್ಗಿ ಸೈನಿಕರ ಮೇಲೆ ದಾಳಿ ಮಾಡುತ್ತಾರೆ. ಇದಕ್ಕೆ ಬಳಸುವುದು ಮೈನ್ ಬಾಂಬ್ ಗಳು ( LED) ಯೋಧರು ಓಡಾಡುವ ದಾರಿಯಲ್ಲಿ ಇರಿಸುತ್ತಾರೆ. ಹೀಗಿರುವ ಪರಿಸ್ಥತಿಯಲ್ಲಿ ಸಂಪತ್ ಕುಮಾರ್ ರಿಗೆ ತಮ್ಮ ಮೊದಲ ಪುತ್ರ ಜನನವಾಗಿರುವ ಬಗ್ಗೆ ಟೆಲಿಗ್ರಾಂ ಬರುತ್ತದೆ.

ಇದು ಇವರಿಗೆ ನಾಲ್ಕು ದಿನದ ಬಳಿಕ ಕೈ ಸೇರಿ ರಜೆ ಪಡೆಯಲು ಅರ್ಜಿ ಹಾಕಲಾಗಿರುತ್ತದೆ. ಆದರೆ ರಜೆ ಸಿಕ್ಕಿರುವುದಿಲ್ಲ ಕೆಲವು ದಿನಗಳ ಬಳಿಕ ಇವರ ರೆಜಿಮೆಂಟ್ ನಲ್ಲಿದ್ದ ರಾಜ್ಯದವರೇ ಆದ ಮೇಜರ್ ಓಂಕಾರ್ ನಾಥ್ ಜೊತೆ ನಾಲ್ವರು ಅಂಗರಕ್ಷಕ ಯೋಧರೊಂದಿಗೆ ಗುಡ್ಡದಂತಹಾ ಸ್ಥಳದಲ್ಲಿ ಇರಿಸಲಾಗಿರುತ್ತದೆ. ಇವರ ಜೊತೆ ಮೇಜರ್ ಮತ್ತು ಸುಬೇದಾರ್ ರವರ ಬ್ಯಾಗ್ ಹೇರಿಕೊಂಡು ಇಬ್ಬರು ಪೋಟರ್ ತೆರಳುತ್ತಿದ್ದ ವೇಳೆ, ಇವರ ಜೊತೆಗೆ ಇವರು ತಮ್ಮ ಕ್ಯಾಂಪಿನಲ್ಲಿ ಇದ್ದ ಶೇರಾ ಜೊತೆಯಲ್ಲಿ ಇರುತ್ತದೆ ,ಶೇರಾ ಯಾರು ಅಂದುಕೊಂಡಿದ್ದಿರಾ? ಆತನೇ ಇವರ ಕ್ಯಾಂಪಿನಲ್ಲಿ ಸಾಕಿದ್ದ ಶ್ವಾನ.

ನೆಲದಲ್ಲಿ ಹುದುಗಿಸಿದ್ದ ಬಾಂಬ್ ಹತ್ತಿರ ಸಮೀಪಿಸುತ್ತಿದ್ದಂತೆ ಅಚಾನಕ್ಕಾಗಿ ಎಲ್ಲರಿಗಿಂತ ಮುನ್ನ ಓಡಿ ಬಿಡುತ್ತದೆ ಇತ್ತ ಉಗ್ರರು ಶೇರಾ ಬಾಂಬ್ ಅನ್ನು ಗುರುತಿಸಿ ಉಗ್ರರ ಸುಳಿವು ನೀಡಬಹುದೆಂದು ಎಂದು ಎಚ್ಚೆತ್ತ ಉಗ್ರರು ತಮ್ಮ ಬಳಿಯಿದ್ದ ರಿಮೋಟ್ ಕಂಟ್ರೋಲರ್ ಮೂಲಕ ಸ್ಪೋಟಿಸಿ ಬಿಡುತ್ತಾರೆ. ಪಾಪ ಶೇರಾ ಅಲ್ಲೇ ಮೃತಪಡುತ್ತಾನೆ ಇವರಿಂದ ಸ್ವಲ್ಪ ದೂರದಲ್ಲಿ ಇವರ ಬ್ಯಾಗ್ ಹೊತ್ತೊಯ್ಯುತ್ತಿದ್ದ ಖಾಸಗಿ ಪೋಟರ್ ಸಹ ಮೃತಪಡುತ್ತಾನೆ.

ಬೆಂಗಾವಲಿನ ಯೋಧರು ಎಚ್ಚೆತ್ತುಕೊಂಡು ಗುಂಡಿನ ದಾಳಿ ನಿರಂತರ ಮಾಡುತ್ತಾರೆ ಈ ವೇಳೆ ಮೇಜರ್ ಓಂಕಾರ್ ನಾಥ್ ಸಹ ವೀರಮರಣವನ್ನಪ್ಪುತ್ತಾರೆ. ಇತ್ತ ಸಂಪತ್ ಕುಮಾರ್ ಇತರೆ ಯೋಧರು ಉಗ್ರರ ಮೇಲೆ ನಿರಂತರ ದಾಳಿ ಮಾಡುತ್ತಿದ್ದ ಪರಿಣಾಮ ಮುಂದೆ ಆಗುವ ಅನಾಹುತ ಅರಿತು ಉಗ್ರರು ಕಾಲುಕೀಳುತ್ತಾರೆ. ಒಂದೆಡೆ  ನೋಡಿದರೆ ಮೇಜರ್ ಸಾವು, ಇನ್ನೊಂದೆಡೆ ನೋಡಿದರೆ ಖಾಸಗಿ ಪೋಟರ್ ಮೃತರಾಗಿದ್ದರೆ ಮತ್ತೊಂದೆಡೆ ಶೇರಾ ದೇಹ ಛಿದ್ರಛಿದ್ರವಾಗಿರುತ್ತದೆ.

ತಮ್ಮ ಕ್ಯಾಂಪಿನಲ್ಲಿ ಮುದ್ದಾಗಿ ಸಾಕಿದ್ದ ನಾಲ್ಕೈದು ಶ್ವಾನಗಳ ಪೈಕಿ ಶೇರಾ ತನ್ನ ಮಾಲೀಕನನ್ನು ಬೀಳ್ಕೊಡಲು ಬಂದಿತ್ತೋ ಏನು, ತಾನೇ ಇಹಲೋಕ ತ್ಯಜಿಸಿ ತನ್ನ ನೀಯತ್ತು ತೋರಿದಕ್ಕೆ ಈಗಲೂ ಆಪ್ತಮಿತ್ರನಂತೆ ಬಂದ “ಶೇರಾ”ಕ್ಕಾಗಿ ಸಂಪತ್ ಮರಗುತ್ತಾರೆ.

ಪತ್ನಿ ವೇದಾವತಿ ಪುತ್ರರಾದ ರೋಹನ್ ಮತ್ತು ಕೀರ್ತನ್ ಜೊತೆಗೆ ಹೊದೆಟ್ಟಿ ಸಂಪತ್ ಕುಮಾರ್

ಸಂಪತ್ ಕುಮಾರ್ ಸಿಪಾಯಿಯಾಗಿ ಸೇನೆ ಸೇರಿ, ಲಾಸ್ ನಾಯಕ್,ನಾಯಕ್,ಹವಲ್ದಾರ್ ನಂತರ ಸುಬೇದಾರ್ ಆಗಿ ತನ್ನ ಸೇವೆಗೆ ಅನುಗುಣವಾಗಿ ಭಡ್ತಿ ಪಡೆದು ಮೈಸೂರಿನಲ್ಲಿ ಜೆ.ಕೆ ಟಯರ್ ಫ್ಯಾಕ್ಟರಿಯಲ್ಲಿ ಕಾರ್ಯ ನಿರ್ವಹಿಸಿಕೊಂಡು ಪತ್ನಿ ವೇದಾವತಿ ಪುತ್ರರಾದ ರೋಹನ್ ಮತ್ತು ಕೀರ್ತನ್ ಜೊತೆ ನೇನಾ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.

ಗಿರಿಧರ್ ಕೊಂಪುಳಿರ,
ಅಂಕಣಕಾರರು ಹಾಗು ಪ್ರಧಾನ ವರದಿಗಾರರು
error: Content is protected !!