fbpx

ಅಂಕಣ : ಅಭಿವ್ಯಕ್ತಿ

ಮೋದಿ ಮೆಚ್ಚುಗೆ ಪಡೆದ ಕಾಮೇಗೌಡರು

ರಾಜೇಶ್ ಕಂಬೇಗೌಡ, ತುಮಕೂರು


ಕೆಲವು ವ್ಯಕ್ತಿಗಳೇ ಹೀಗೆ ಎಲೆ ಮರೆಯ ಕಾಯಂತೆ.! ಇವತ್ತು ಇಡೀ ರಾಷ್ಟ್ರವೆ ಆ ವ್ಯಕ್ತಿಯ ಬಗ್ಗೆ ಮಾತಡ್ತಿದೆ ಎಲ್ಲಾ ಮಾಧ್ಯಮಗಳಲ್ಲೂ ಇವರದ್ದೇ ಮಾತು. ಕಾರಣ ಪ್ರಧಾನಿ ಮೋದಿಯವರ “ಮನ್ ಕಿ ಬಾತ್” (ಮನದ ಮಾತು) ಕಾರ್ಯಕ್ರಮದಲ್ಲಿ ಮೋದಿಯವರು ಆ ವ್ಯಕ್ತಿಯನ್ನು ಶ್ಲಾಘಿಸಿದ್ದಾರೆ.“ಕಾಮೇಗೌಡರು” ಈ ಹೆಸರು ಬಲು ಅಪರೂಪ. ನೋಡಲು ತೀರಾ ಸಾಮಾನ್ಯ ನಂತೆ ಕಾಣುವ ಈ ವ್ಯಕ್ತಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ನೀಲಿ ವೆಂಕಟಗೌಡ, ರಾಜಮ್ಮ ದಂಪತಿಯ ಮಗ ಕಾಮೇಗೌಡ ಶಾಲೆ ಕುರಿತು ವಿದ್ಯಾವಂತರಲ್ಲ ವಯಸ್ಸು 83. ಇವರನ್ನ ಮೋದಿಯವರು ಹೊಗಳಿದ್ದಾರೆ, ಕಾರಣ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿರುವ ಆ ಅಸಾಧಾರಣ ಸಾಧನೆ.


14 ವರ್ಷಗಳ ಹಿಂದೆ ಕಾಮೇಗೌಡರು ತಮ್ಮ ಹಳ್ಳಿಯ ಪಕ್ಕದ ಕುಂದೂರು ಬೆಟ್ಟಕ್ಕೆ ಕುರಿ ಜಾನುವಾರುಗಳನ್ನು ಮೇಯಿಸಲು ಹೋದಾಗ ಅವರಿಗೆ ದಣಿವಾಗಿ ನೀರು ಸಿಗದೆ ಪರದಾಡಿ ಕಡೆಗೆ ಯಾರದೋ ಮನೆಯಲ್ಲಿ ನೀರು ಕೇಳಿ ಕುಡಿದು ದಣಿವಾರಿಸಿಕೊಳ್ಳುತ್ತಾರೆ. ಆ ಕ್ಷಣ ಅವರಿಗೆ ಒಂದು ಯೋಚನೆ ಬರುತ್ತದೆ, ನಾವಾದರೂ ಮನುಷ್ಯರು ನೀರು ಬೇಕಾದಾಗ ಕೇಳಿ ಇಲ್ಲವಾದಲ್ಲಿ ಖರೀದಿಸಿ ಪಡೆಯುತ್ತೇವೆ ಆದರೆ ತನ್ನಂತೆ ಬಾಯಾರಿದ ಮೂಕ ಪ್ರಾಣಿಗಳ ಗತಿ ಏನು? ಎಂದು ಆಲೋಚಿಸಿದರು. ಅವರು ಆಲೋಚಿಸಿ ಸುಮ್ಮನಾಗಲಿಲ್ಲ. ಬದಲಿಗೆ ಬೆಟ್ಟದ ತಪ್ಪಲಿನಲ್ಲಿ ಪಶು ಪಕ್ಷಿಗಳಿಗಾಗಿ ಕೆರೆ ನಿರ್ಮಾಣಕ್ಕೆ ಮುಂದಾದರು.
ತನ್ನ ಸೊಸೆ ಗರ್ಭಿಣಿಯಾಗಿದ್ದಾಗ ಹೆರಿಗೆಗೆಂದು ಇಪ್ಪತ್ತು ಸಾವಿರ ಕೂಡಿಟ್ಟಿದ್ದರಂತೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆಯಾಗಿ ಗಂಡು ಮಗು ಜನನವಾಯಿತು. ಒಂದು ರೂಪಾಯಿಯೂ ಖರ್ಚಾಗಲಿಲ್ಲ ಮೊಮ್ಮಗ ಉಳಿಸಿದ ಇಪ್ಪತ್ತು ಸಾವಿರದಲ್ಲಿ ಕೆರೆ ಕಟ್ಟುವ ಕೆಲಸ ಶುರುಮಾಡಿದರು. ಕಾಮೇಗೌಡರು ಕೆರೆ ಕಟ್ಟಲು ಬೆಟ್ಟದ ಕೆಳಗೆ ಗುಂಡಿ ತೋಡುತ್ತಿದ್ದನ್ನ ಕಂಡ ಊರಿನ ಜನರು ನಕ್ಕು ಗೇಲಿ ಮಾಡಿದ್ದರು. ಇವನಿಗೆ ಹುಚ್ಚು ಹಿಡಿದಿದೆ, ಅದಕ್ಕೆ ಇಲ್ಲಿ ಕೆರೆ ತೋಡುತ್ತಿದ್ದಾನೆ ಎಂದು ಮಾತನಾಡಿದ್ದರು. ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಮುಂದುವರಿಸಿದ ಕಾಮೇಗೌಡರು ಸದ್ಯ 16 ಕೆರೆಗಳನ್ನು ತನ್ನ ಸ್ವಂತ ಹಣದಲ್ಲಿ ನಿರ್ಮಿಸಿ ಸಂರಕ್ಷಿಸುತಿದ್ದಾರೆ. ಇವರು ಕಟ್ಟಿದ ಕೆರೆಗಳಲ್ಲಿ ಬೇಸಿಗೆಯಲ್ಲಿ ಕೂಡ ನೀರು ತುಂಬಿರುತ್ತದೆ.
ರಾಜ್ಯ ಸರ್ಕಾರ ಕಾಮೇಗೌಡರ ಈ ಸಾಧನೆಯನ್ನು ಕಂಡು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತದೆ, ಪ್ರಶಸ್ತಿಯೊಂದಿಗೆ ಬಂದಂತಹ ಒಂದು ಲಕ್ಷ ಮೊತ್ತದ ಹಣವನ್ನೂ ಕೆರೆ ನಿರ್ಮಿಸಲು ವಿನಿಯೋಗಿಸಿದ್ದು ವಿಶೇಷ.


ಮನೆಯಲ್ಲಿ ಆರ್ಥಿಕ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲವಾದರೂ ಮನೆಯವರು ವಿರೋಧದ ನಡುವೆಯೂ ತಮಗೆ ಲಭ್ಯವಿದ್ದ ಹಣದಲ್ಲಿಯೇ ತಮ್ಮ ಪರಿಸರ ಪ್ರೇಮ ಮೆರೆದಿದ್ದಾರೆ. ಇದು ಎಂಥವರೂ ಆಶ್ಚರ್ಯ ಪಡಬೇಕಾದ ಸಂಗತಿ. ಹಣ ಬಂದರೆ ಸಾಕು ತಮ್ಮ ಸ್ವಾರ್ಥಕ್ಕೆ ಬಳಸುವ ಜನರ ನಡುವೆ ಎಳ್ಳಷ್ಟೂ ಪ್ರತಿಫಲ ಬಯಸದೆ ಕೆರೆಗಳ ನಿರ್ಮಾಣ ಮಾಡಿ ನಿರ್ವಹಣೆ ಮಾಡುತ್ತಿರುವ ಇವರು ನಿಜಕ್ಕೂ ಗೌರವಕ್ಕೆ ಅರ್ಹರು.
ಇಷ್ಟೇ ಅಲ್ಲದೇ ತಾನು ಕುರಿ ಕಾಯುವ ಕುಂದೂರು ಬೆಟ್ಟ ಯಾವತ್ತೂ ಹಚ್ಚ ಹಸಿರಾಗಿರಬೇಕೆಂಬ ಮಹದಾಸೆಯಿಂದ ಬೆಟ್ಟದ ಸುತ್ತಲೂ 2 ಸಾವಿರಕ್ಕೂ ಹೆಚ್ಚು ಗಿಡ ನೆಟ್ಟು ಬೆಳೆಸಿದ್ದಾರೆ. ತಮ್ಮ ಕೈಯ್ಯಾರೆ ನೆಟ್ಟ ಗಿಡಗಳು ಇಂದು ಮರವಾಗಿರುವುದನ್ನು ಕಂಡು ಖುಷಿಯಿಂದ ಆ ಕಾಡಲ್ಲಿ ಸುತ್ತಾಡುತ್ತಾರೆ. ಅಲ್ಲದೇ ತನ್ನ ತಿಳುವಳಿಕೆಗೆ ಬಂದ ಕೆಲವು ಉತ್ತಮ ಸಂದೇಶ ಮತ್ತು ಪರಿಸರ ಕಾಳಜಿ ಸಂದೇಶಗಳನ್ನು ಬೆಟ್ಟದ ಬಂಡೆಯ ಮೇಲೆ ಬಣ್ಣದಿಂದ ಬರೆಸೋ ಮೂಲಕ ಜನರಲ್ಲಿ ಪರಿಸರ ಕಳಕಳಿ ಮೂಡಿಸುತ್ತಿದ್ದಾರೆ.


ಇವರ ಈ ಸತ್ಕರ್ಯಾದ ಸಾಧನೆಗೆ ಮುರುಘ ಮಠ “ಬಸವ ಪ್ರಶಸ್ತಿ” ಪ್ರದಾನ ಮಾಡಿ ಗೌರವಿಸಲಾಗಿದೆ, ಹಲವಾರು ಸಂಘ ಸಂಸ್ಥೆಗಳು ಹಲವು ಪ್ರಶಸ್ತಿ, ಬಿರುದು ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದಾರೆ. ಅದರಿಂದ ಬಂದ ಹಣವನ್ನೂ ಸಹ ಕೆರೆಗಳ ನಿರ್ಮಾಣ, ನಿರ್ವಹಣೆ ಮತ್ತು ಪರಿಸರ, ಜಲ ಸಂರಕ್ಷಣೆಗೆ ಬಳಸಿದ್ದಾರೆ ಕಾಮೇಗೌಡರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಮೇಗೌಡರನ್ನು ಮೋದಿಯವರು ತಮ್ಮ “ಮನ್ ಕೀ ಬಾತ್” (ಮನದ ಮಾತಿನಲ್ಲಿ) ಉಲ್ಲೇಖಿಸಿದ್ದಾರೆ. ಕೆರೆಗಳನ್ನು ಕಟ್ಟಿ ಸಂರಕ್ಷಿಸುವ ಅವರ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಿ ಮೋದಿಯವರು. “ಅವರು (ಕಾಮೇಗೌಡ)ಕಟ್ಟಿರುವ ಈ ಕೆರೆಗಳು ಬಹಳ ದೊಡ್ಡದಾಗಿರಲಿಕ್ಕಿಲ್ಲ, ಆದರೆ, ಅವರ ಪ್ರಯತ್ನ ಬಹಳ ದೊಡ್ಡದು” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಇಳಿ ವಯಸ್ಸಿನಲ್ಲೂ ಕಾಮೇಗೌಡರ ಪರಿಸರ ಪ್ರೇಮ, ಪರಿಸರಪರ ಕಾಳಜಿ ಯುವಕರಿಗೆ ಸ್ಪೂರ್ತಿಯಾಗಬೇಕು. ಇಂತಹ ಮನಸ್ಥಿತಿ ಇರುವಂತಹ ವ್ಯಕ್ತಿಗಳು ಕನಿಷ್ಠ ಹತ್ತು ಹಳ್ಳಿಗಳಿಗೆ ಒಬ್ಬರಿದ್ದಾರೆ ಸಾಕು.
ಕಾಮೇಗೌಡರ ಅನುಭವ ಮಾತು – “ಮನುಷ್ಯರು ನೀರು ಬೇಕೆಂದಾಗ ಖರೀದಿಸಿ ಬಳಸುತ್ತೇವೆ . ಆದರೆ ಪ್ರಾಣಿ – ಪಕ್ಷಿಗಳು ಹಾಗೇ ಮಾಡಲು ಸಾಧ್ಯವೇ” !?

ಅಂಕಣಕಾರರು, ರಾಜೇಶ್ ಕಂಬೇಗೌಡ
error: Content is protected !!